ಹುಬ್ಬಳ್ಳಿ: ಆದಾಯಕ್ಕಿಂತ ಮೀರಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಕಂಡಕ್ಟರ್ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ ನಗರ ಡಿಪೋದಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಷಡಕ್ಷರಯ್ಯ ಅತ್ತಿಕಟ್ಟಿಮಠ ಎಂಬುವವರಿಗೆ ಸೇರಿದ ನಿವಾಸಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.
ಷಡಕ್ಷರಯ್ಯ ಅವರು ಸಾರಿಗೆ ಇಲಾಖೆಯಲ್ಲಿ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರೂ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ 20×30 ಅಳತೆಯ ಮನೆಯನ್ನೂ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು, ಷಡಕ್ಷರಯ್ಯ ಅವರಿಗೆ ಸೇರಿದ ಒಟ್ಟು ಮೂರು ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು, ಮನೆಗಳಲ್ಲಿನ ಆಸ್ತಿ-ಪಾಸ್ತಿ, ದಾಖಲೆ ಪತ್ರಗಳು ಹಾಗೂ ಇತರೆ ಸ್ವತ್ತುಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಸರ್ಕಾರಿ ನೌಕರರ ಆದಾಯಕ್ಕೆ ಹೋಲಿಸಿದರೆ ಅವರ ಬಳಿ ಇರುವ ಆಸ್ತಿ ಎಷ್ಟಿದೆ? ಆದಾಯದ ಮೂಲ ಯಾವುದು? ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಯಾವುವು? ಎಂಬಿತ್ಯಾದಿ ಅಂಶಗಳ ಕುರಿತು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ದಾಳಿಯ ವೇಳೆ ಪತ್ತೆಯಾಗಿರುವ ಆಸ್ತಿ-ಪಾಸ್ತಿಗಳ ಸಂಪೂರ್ಣ ವಿವರ ಹಾಗೂ ಲೋಕಾಯುಕ್ತ ತನಿಖೆಯ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಆದಾಯಕ್ಕಿಂತ ಮೀರಿ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ನಡೆದಿರುವ ಈ ದಾಳಿ ಹುಬ್ಬಳ್ಳಿಯಲ್ಲಿ ಕುತೂಹಲ ಮೂಡಿಸಿದೆ.