ಹುಬ್ಬಳ್ಳಿ: ಹಗಲಿರುಳು ಎನ್ನದೆ ಸಾರ್ವಜನಿಕರ ರಕ್ಷಣೆಗಾಗಿ ಶ್ರಮಿಸುವ ಪೊಲೀಸ್ ಸಿಬ್ಬಂದಿಯ ಬದುಕಿನಲ್ಲಿ ಕರ್ತವ್ಯದ ಒತ್ತಡದ ನಡುವೆಯೂ ಸಂತಸದ ಕ್ಷಣಗಳು ಅರಳಿವೆ. ಸದಾ ಕಾನೂನು ಸುವ್ಯವಸ್ಥೆ ಕಾಪಾಡುವ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ, ಅನ್ಯಾಯದ ವಿರುದ್ಧ ಹೋರಾಡುವ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಶ್ರಮಿಸುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಈ ಬಾರಿಯ ವಾರ್ಷಿಕ ಕ್ರೀಡಾಕೂಟ ಹೊಸ ಉತ್ಸಾಹ, ಹುರುಪು ಹಾಗೂ ಸಂತಸವನ್ನು ತುಂಬಿದೆ.
2026-27ನೇ ಸಾಲಿನ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯದ 27ನೇ ವಾರ್ಷಿಕ ಕ್ರೀಡಾಕೂಟದಲ್ಲಿ ಹುಬ್ಬಳ್ಳಿ ದಕ್ಷಿಣ ಉಪವಿಭಾಗವು ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದು ಉಪವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಲ್ಲಿ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
ವರ್ಷವಿಡೀ ಜನರ ಸಮಸ್ಯೆಗಳಿಗೆ ಕಿವಿಯಾಗುತ್ತಾ, ಸಾರ್ವಜನಿಕರಿಗೆ ಎದುರಾಗುವ ಅನ್ಯಾಯಗಳ ವಿರುದ್ಧ ಧ್ವನಿಯಾಗುತ್ತಾ, ಅಪರಾಧಗಳ ನಿಯಂತ್ರಣ ಹಾಗೂ ಸಮಾಜದ ರಕ್ಷಣೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಈ ಕ್ರೀಡಾಕೂಟ ಕೇವಲ ಕ್ರೀಡಾ ಸ್ಪರ್ಧೆಯಾಗಿರಲಿಲ್ಲ. ಅದು ಒತ್ತಡದ ಬದುಕಿನ ನಡುವೆ ಮನಸ್ಸು ಬಿಚ್ಚಿ ನಗುವ, ಸಹೋದ್ಯೋಗಿಗಳೊಂದಿಗೆ ಬೆರೆಯುವ, ತಮ್ಮಲ್ಲಿರುವ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸುವ ಅಪರೂಪದ ವೇದಿಕೆಯಾಗಿತ್ತು.
ಕ್ರೀಡಾಕೂಟದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದಿದ್ದು, ಅಧಿಕಾರಿಗಳಿಂದ ಹಿಡಿದು ಸಿಬ್ಬಂದಿಯವರೆಗೂ ಎಲ್ಲರೂ ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ಕ್ರೀಡಾಂಗಣದಲ್ಲಿ ಸ್ಪರ್ಧೆಯ ಕಾವು ಒಂದೆಡೆಯಾದರೆ, ಮತ್ತೊಂದೆಡೆ ಹಾಡು, ನೃತ್ಯ ಹಾಗೂ ಸಂಭ್ರಮದ ಕ್ಷಣಗಳು ಎಲ್ಲರ ಗಮನ ಸೆಳೆದವು.
ವಿಶೇಷವಾಗಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಒಟ್ಟಾಗಿ ಹೆಜ್ಜೆ ಹಾಕಿದ ನೃತ್ಯ, ಡ್ಯಾನ್ಸ್ ಹಾಗೂ ಸಂಭ್ರಮದ ದೃಶ್ಯಗಳು ನೋಡುಗರಲ್ಲಿ ಸಂತಸ ಮೂಡಿಸಿದವು. ಸದಾ ಗಂಭೀರ ಮುಖಭಾವದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಈ ಬಾರಿ ತಮ್ಮೊಳಗಿನ ಕಲಾವಿದನನ್ನೂ ಹೊರತಂದು ಕುಣಿದು ಕುಪ್ಪಳಿಸಿದ್ದು ಕ್ರೀಡಾಕೂಟಕ್ಕೆ ಮತ್ತಷ್ಟು ಮೆರುಗು ನೀಡಿತು.
ಹುದ್ದೆ, ಅಧಿಕಾರ, ಜವಾಬ್ದಾರಿಗಳ ಎಲ್ಲೆಗಳನ್ನು ಮರೆತು ಒಂದೇ ಕುಟುಂಬದ ಸದಸ್ಯರಂತೆ ಬೆರೆತು ಸಂಭ್ರಮಿಸಿದ ಪೊಲೀಸ್ ಕುಟುಂಬದ ಈ ಕ್ಷಣಗಳು ನಿಜಕ್ಕೂ ವಿಶೇಷವಾಗಿದ್ದವು. ಅಧಿಕಾರಿಗಳು ಮತ್ತು ಸಿಬ್ಬಂದಿಯ ನಡುವಿನ ಆತ್ಮೀಯತೆ, ತಂಡದ ಮನೋಭಾವ ಹಾಗೂ ಪರಸ್ಪರ ಪ್ರೋತ್ಸಾಹ ಕ್ರೀಡಾಕೂಟದ ಸೌಂದರ್ಯವನ್ನು ಹೆಚ್ಚಿಸಿತು.
ಕುವೆಂಪು ಅವರ ವಿಶ್ವಮಾನವ ಸಂದೇಶದ ಆಶಯದಂತೆ, ಮನುಷ್ಯತ್ವವೇ ಎಲ್ಲಕ್ಕಿಂತ ದೊಡ್ಡದು ಎಂಬ ಭಾವನೆ ಇಲ್ಲಿ ಅನಾವರಣಗೊಂಡರೆ, ದ.ರಾ. ಬೇಂದ್ರೆಯವರ ಕಾವ್ಯದ ಸೊಗಡಿನಂತೆ ಸಂಭ್ರಮ, ಉತ್ಸಾಹ ಮತ್ತು ಜೀವನೋಲ್ಲಾಸ ಕ್ರೀಡಾಂಗಣದಲ್ಲಿ ಅನುರಣಿಸಿತು.
ಕರ್ತವ್ಯದ ವೇಳೆ ಜನರ ಕಣ್ಣೀರೊರೆಸುವ ಕೈಗಳು, ಕ್ರೀಡಾಂಗಣದಲ್ಲಿ ಚಪ್ಪಾಳೆ ತಟ್ಟಿದವು; ಸಮಾಜದ ಸುರಕ್ಷತೆಗಾಗಿ ಸದಾ ಎಚ್ಚರವಾಗಿರುವ ಹೆಜ್ಜೆಗಳು, ಸಂಭ್ರಮದ ತಾಳಕ್ಕೆ ಹೆಜ್ಜೆ ಹಾಕಿದವು. ಇದೇ ಪೊಲೀಸ್ ಬದುಕಿನ ಮತ್ತೊಂದು ಸುಂದರ ಮುಖ.
ಒಟ್ಟಿನಲ್ಲಿ, ಈ ಬಾರಿಯ ವಾರ್ಷಿಕ ಕ್ರೀಡಾಕೂಟವು ಕೇವಲ ಗೆಲುವು-ಸೋಲಿನ ಲೆಕ್ಕಾಚಾರಕ್ಕೆ ಸೀಮಿತವಾಗದೆ, ಪೊಲೀಸ್ ಕುಟುಂಬದ ಒಗ್ಗಟ್ಟು, ಸ್ನೇಹ, ಸಂತೋಷ ಹಾಗೂ ಕ್ರೀಡಾಸ್ಫೂರ್ತಿಯ ಹಬ್ಬವಾಗಿ ಮೂಡಿಬಂದಿದೆ. ಮೊದಲ ಬಾರಿಗೆ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಹುಬ್ಬಳ್ಳಿ ದಕ್ಷಿಣ ಉಪವಿಭಾಗದ ಸಾಧನೆ ಈ ಕ್ರೀಡಾಕೂಟದ ಮತ್ತೊಂದು ವಿಶೇಷ ಮೈಲಿಗಲ್ಲಾಗಿದೆ.
ಜನರಿಗಾಗಿ ಸದಾ ಕರ್ತವ್ಯ… ಕರ್ತವ್ಯದ ನಡುವೆ ಒಂದಿಷ್ಟು ಸಂಭ್ರಮ… ಇದೇ ನಮ್ಮ ಹುಬ್ಬಳ್ಳಿ-ಧಾರವಾಡ ಪೊಲೀಸರ ನಿಜವಾದ ಉತ್ಸಾಹಕ್ಕೆ ಸಾಕ್ಷಿ!