ಕರ್ನಾಟಕ

ಕುಡಿದ ಮತ್ತಿನಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿದ ಕಾನ್ಸ್‌ಟೇಬಲ್! ಆರೋಪಿ ಸಚಿನ್ ಬಂಧನ

ಮೂಲಕ News Desk | ಪ್ರಕಟಿಸಲಾಗಿದೆ November 14, 2026 November 14, 2026 | 04:29 AM 162 ವೀಕ್ಷಣೆಗಳು

ಬೆಂಗಳೂರು: ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಮನೆಯೊಂದರ ಗೋಡೆಗೆ ಡಿಕ್ಕಿ ಹೊಡೆದಿದ್ದಲ್ಲದೆ, ಸ್ಥಳಕ್ಕೆ ಬಂದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರಿಗೇ ಕಪಾಳಮೋಕ್ಷ ಮಾಡಿದ ಆರೋಪದ ಮೇಲೆ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬನನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಕೃಷ್ಣ ಅವರಿಗೆ ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿರುವಾತ ಸಿಎಎಆರ್ (CAAR) ಕಾನ್ಸ್‌ಟೇಬಲ್ ಸಚಿನ್ ಎಂದು ತಿಳಿದುಬಂದಿದೆ.


ಘಟನೆ ನಡೆದಿದ್ದೇಗೆ?


ನಿನ್ನೆ ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದ ಆರೋಪಿ ಸಚಿನ್, ಮನೆಯೊಂದರ ಗೋಡೆಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಆತಂಕಗೊಂಡ ಮನೆ ಮಾಲೀಕರು ತಕ್ಷಣವೇ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.


112ರಿಂದ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಸಂಚಾರಿ ಪೊಲೀಸರು ತೆರಳಿದ್ದಾರೆ. ಈ ವೇಳೆ ಆರೋಪಿ ಸಚಿನ್ ಸಂಚಾರಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಅತಿರೇಕವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.


ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಕೃಷ್ಣ ಅವರು, ಅಪಘಾತದ ಕುರಿತು ಸಚಿನ್‌ನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಸಚಿನ್, ಏಕಾಏಕಿ ಸಬ್‌ಇನ್ಸ್‌ಪೆಕ್ಟರ್ ಕೃಷ್ಣ ಅವರ ಕೆನ್ನೆಗೆ ಹೊಡೆದಿದ್ದಾನೆ ಎನ್ನಲಾಗಿದೆ.


ಎರಡು ಪ್ರಕರಣ, ಆರೋಪಿ ಅರೆಸ್ಟ್!


ಘಟನೆಗೆ ಸಂಬಂಧಿಸಿದಂತೆ ಸಬ್‌ಇನ್ಸ್‌ಪೆಕ್ಟರ್ ಕೃಷ್ಣ ಅವರು ಆರೋಪಿ ಸಚಿನ್ ವಿರುದ್ಧ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗೆ ಹಲ್ಲೆ ನಡೆಸಿದ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸರು ಆರೋಪಿ ಸಚಿನ್‌ನನ್ನು ಬಂಧಿಸಿದ್ದಾರೆ.


ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯ ಮೇಲೆಯೇ ಹಲ್ಲೆ ನಡೆಸಿದ ಘಟನೆ ಇದೀಗ ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.