₹17 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶಕ್ಕೆ ಪಡೆದ ಬಳ್ಳಾರಿ ಪೊಲೀಸರು
ಬಳ್ಳಾರಿ: ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಗಮನವನ್ನು ಬೇರೆಡೆ ಸೆಳೆದು ಚಿನ್ನಾಭರಣ ಹಾಗೂ ಹಣ ಕಳ್ಳತನ ಮಾಡುತ್ತಿದ್ದ ಇಬ್ಬರು ಮಹಿಳೆಯರ ಜಾಡು ಪತ್ತೆಹಚ್ಚಿರುವ ಬಳ್ಳಾರಿಯ ಎಪಿಎಂಸಿ ಪೊಲೀಸರು, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಇಬ್ಬರು ಮಹಿಳೆಯರನ್ನು ಪತ್ತೆಹಚ್ಚಿ ಅವರಿಂದ ಬರೋಬ್ಬರಿ 17 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಕುಪ್ಪಂ ಪಟ್ಟಣಕ್ಕೆ ತೆರಳಿದ ಬಳ್ಳಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಕಳ್ಳತನದ ಆರೋಪಿಗಳಾದ ಭುವನಾ (35) ಹಾಗೂ ರೂಪಾ (36) ಎಂಬುವವರನ್ನು ಪತ್ತೆಹಚ್ಚಿದ್ದಾರೆ. ಕಳ್ಳತನ ಮಾಡಿ ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದ ಚಿನ್ನಾಭರಣ ಹಾಗೂ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಸ್ ಪ್ರಯಾಣದ ವೇಳೆ ಕೈಚಳಕ:
ರಾಂಪುರದಿಂದ ಬಳ್ಳಾರಿಗೆ ಬರುತ್ತಿದ್ದ ಬಸ್ನಲ್ಲಿ ಪ್ರಯಾಣಿಕರ ಗಮನವನ್ನು ಬೇರೆಡೆ ಸೆಳೆದಿದ್ದ ಇಬ್ಬರು ಮಹಿಳೆಯರು, ಚಿತ್ರದುರ್ಗ ಮೂಲದ ಯಲ್ಲಮ್ಮ ಎಂಬುವವರ ಬ್ಯಾಗ್ನಲ್ಲಿದ್ದ 135 ಗ್ರಾಂ ಚಿನ್ನಾಭರಣ ಹಾಗೂ ಒಂದು ಲಕ್ಷ ರೂಪಾಯಿ ನಗದನ್ನು ಕಳ್ಳತನ ಮಾಡಿದ್ದರು ಎನ್ನಲಾಗಿದೆ.
ಇದಲ್ಲದೆ, ಸೆಪ್ಟೆಂಬರ್ 3ರಂದು ಬಳ್ಳಾರಿ ಬಸ್ ನಿಲ್ದಾಣದಲ್ಲಿ ಪಾರ್ವತಮ್ಮ ಎಂಬುವವರ 4.5 ತೊಲೆ ಚಿನ್ನಾಭರಣವನ್ನೂ ಕಳವು ಮಾಡಿದ್ದರು. ಈ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣಗಳ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಜಾಡು ಪತ್ತೆಹಚ್ಚಿ ಆಂಧ್ರಪ್ರದೇಶದ ಕುಪ್ಪಂ ಪಟ್ಟಣಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳ ಮನೆಯಲ್ಲಿ ಇರಿಸಲಾಗಿದ್ದ ಸುಮಾರು 17 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಸ್ಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಪತ್ತೆಯಿಂದಾಗಿ ಎರಡು ಪ್ರಕರಣಗಳ ತನಿಖೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿದಂತಾಗಿದೆ.