ಕರ್ನಾಟಕ

ಹುಬ್ಬಳ್ಳಿಯಲ್ಲಿ ‘ಪ್ರೀತಿ ಸಿಲ್ಕ್’ 2ನೇ ಮಳಿಗೆಗೆ ಅದ್ಧೂರಿ ಚಾಲನೆ

ಮೂಲಕ News Desk | ಪ್ರಕಟಿಸಲಾಗಿದೆ November 2, 2026 November 2, 2026 | 12:06 PM 149 ವೀಕ್ಷಣೆಗಳು


ಗೋಕುಲ ರಸ್ತೆಯಲ್ಲಿ ನೂತನ ಫ್ಲ್ಯಾಗ್‌ಶಿಪ್ ಶೋರೂಂ ಉದ್ಘಾಟನೆ; ಗ್ರಾಹಕರಿಗೆ ಶೇ.10ರಷ್ಟು ವಿಶೇಷ ರಿಯಾಯಿತಿ

ಹುಬ್ಬಳ್ಳಿ: ವಸ್ತ್ರ ವ್ಯಾಪಾರ ಕ್ಷೇತ್ರದಲ್ಲಿ ತನ್ನದೇ ಆದ ಗುರುತು ಮೂಡಿಸಿರುವ ‘ಪ್ರೀತಿ ಸಿಲ್ಕ್’ ಸಂಸ್ಥೆಯ ಎರಡನೇ ಮಳಿಗೆ ನಗರದ ಗೋಕುಲ ರಸ್ತೆಯಲ್ಲಿ ಭಾನುವಾರ ಅದ್ಧೂರಿಯಾಗಿ ಉದ್ಘಾಟನೆಗೊಂಡಿತು. ನೂತನವಾಗಿ ಆರಂಭಗೊಂಡಿರುವ ‘ಪ್ರೀತಿ ಸಿಲ್ಕ್ ಫ್ಲ್ಯಾಗ್‌ಶಿಪ್ ಶೋರೂಂ’ಗೆ ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಚಾಲನೆ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಹುಬ್ಬಳ್ಳಿಯಲ್ಲಿಯೇ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಹಾಗೂ ವೈವಿಧ್ಯಮಯ ಉಡುಪುಗಳು ದೊರೆಯುತ್ತಿರುವುದು ಸಂತಸದ ಸಂಗತಿ. ಮುಂಬೈ, ಸೊಲ್ಲಾಪುರದಂತಹ ನಗರಗಳಿಗೆ ತೆರಳುವ ಅಗತ್ಯವಿಲ್ಲದೆ ಸ್ಥಳೀಯವಾಗಿಯೇ ಉತ್ತಮ ಗುಣಮಟ್ಟದ ಬಟ್ಟೆಗಳನ್ನು ಖರೀದಿಸುವ ಅವಕಾಶ ಕಲ್ಪಿಸಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ಸಂಸ್ಥೆ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

ನೂತನ ಮಳಿಗೆಯಲ್ಲಿ ಬನಾರಸಿ, ಕಾಂಜೀವರಂ, ಬಂಧನಿ, ಕಾಶ್ಮೀರಿ ಕಸೂತಿ ಹಾಗೂ ಇಳಕಲ್ ಸೇರಿದಂತೆ ವಿವಿಧ ವಿನ್ಯಾಸಗಳ ರೇಷ್ಮೆ ಸೀರೆಗಳು, ಘಾಗ್ರಾ, ಲೆಹೆಂಗಾ, ಪುರುಷರ ಕುರ್ತಾ, ಪೈಜಾಮ, ಶೆರ್ವಾನಿ, ಸೂಟ್ ಹಾಗೂ ರೆಡಿಮೇಡ್ ಉಡುಪುಗಳು ಲಭ್ಯವಿವೆ. ಅಲ್ಲದೆ, ವಿವಿಧ ಸಮಾರಂಭಗಳಿಗೆ ಅಗತ್ಯವಿರುವ ಜವಳಿ ಉತ್ಪನ್ನಗಳು ಮತ್ತು ಆಕರ್ಷಕ ಬೆಳ್ಳಿಯ ಆಭರಣಗಳಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿಯ ಮಹೇಶ ಭಂಡಾರಿ ತಿಳಿಸಿದರು.

ನೂತನ ಮಳಿಗೆಯ ಉದ್ಘಾಟನೆಯ ಅಂಗವಾಗಿ ಗ್ರಾಹಕರಿಗೆ ಎಲ್ಲ ಬಗೆಯ ಉಡುಪುಗಳ ಖರೀದಿಯ ಮೇಲೆ ಶೇ.10ರಷ್ಟು ವಿಶೇಷ ರಿಯಾಯಿತಿ ಘೋಷಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಶಿರಹಟ್ಟಿಯ ಫಕೀರ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಜಗದೀಶ ಶೆಟ್ಟರ್, ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪ್ರೀತಿ ಸಿಲ್ಕ್ ಸಂಸ್ಥೆಯ ಆಡಳಿತ ಮಂಡಳಿಯ ರಜತ್ ಭಂಡಾರಿ, ರಾಹುಲ್ ಭಂಡಾರಿ ಹಾಗೂ ಇತರರು ಭಾಗವಹಿಸಿದ್ದರು.