ಕರ್ನಾಟಕ

ಜೋಡಟ್ಟಿ ಜಾತ್ರೆಯಲ್ಲಿ ಪ್ರಸಾದ ಸೇವಿಸಿ 107 ಭಕ್ತರು ಅಸ್ವಸ್ಥ

ಮೂಲಕ News Desk | ಪ್ರಕಟಿಸಲಾಗಿದೆ October 22, 2026 October 22, 2026 | 06:39 AM 39 ವೀಕ್ಷಣೆಗಳು


ಚಿಕ್ಕೋಡಿ: ದೇವಸ್ಥಾನದ ಜಾತ್ರೆಯ ಅಂಗವಾಗಿ ವಿತರಿಸಲಾದ ಪ್ರಸಾದ ಸೇವಿಸಿದ 107 ಭಕ್ತರು ಅಸ್ವಸ್ಥಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಟ್ಟಿ ಗ್ರಾಮದಲ್ಲಿ ನಡೆದಿದೆ. ವಾಂತಿ ಮತ್ತು ಭೇದಿಯಿಂದ ಬಳಲಿದ ಭಕ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಹುತೇಕರು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.


ಜೋಡಟ್ಟಿ ಗ್ರಾಮದ ಶೇಲ್ಲೆವ್ವಾ ದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ ಜಾತ್ರಾ ಮಹೋತ್ಸವ ನಡೆದಿತ್ತು. ಈ ವೇಳೆ ಭಕ್ತರಿಗೆ ಪ್ರಸಾದ ವಿತರಿಸಲಾಗಿತ್ತು. ಕಳೆದ ರಾತ್ರಿ ಪ್ರಸಾದ ಸೇವಿಸಿದ ಕೆಲವರಿಗೆ ಏಕಾಏಕಿ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದ್ದು, ಹಲವರು ಅಸ್ವಸ್ಥರಾಗಿದ್ದಾರೆ. ಒಟ್ಟು 107 ಜನರಲ್ಲಿ ಆಹಾರ ವಿಷಬಾಧೆ ಉಂಟಾಗಿರುವುದು ದೃಢಪಟ್ಟಿದೆ.


71 ಮಂದಿ ಗುಣಮುಖ, ಇಬ್ಬರ ಸ್ಥಿತಿ ಗಂಭೀರ

ಅಸ್ವಸ್ಥಗೊಂಡ ಭಕ್ತರನ್ನು ತಕ್ಷಣವೇ ಕಬ್ಬೂರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ 71 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಉಳಿದ 33 ಮಂದಿಗೆ ಕಬ್ಬೂರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.


ಸ್ಥಳಕ್ಕೆ ಅಧಿಕಾರಿಗಳ ಭೇಟಿ, ತನಿಖೆ ಆರಂಭ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಚಿಕ್ಕೋಡಿ ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಸಾದ ತಯಾರಿಕೆಯಲ್ಲಿ ಬಳಸಿದ ಆಹಾರ ಪದಾರ್ಥಗಳ ಗುಣಮಟ್ಟ, ತಯಾರಿಕೆಯ ವಿಧಾನ ಮತ್ತು ನೈರ್ಮಲ್ಯದ ಕೊರತೆಯಿಂದ ಆಹಾರ ವಿಷಬಾಧೆ ಸಂಭವಿಸಿರಬಹುದೇ ಎಂಬ ಕುರಿತು ತನಿಖೆ ಕೈಗೊಳ್ಳಲಾಗಿದೆ.


ಜಾತ್ರೆಯ ಸಂದರ್ಭದಲ್ಲಿ ಪ್ರಸಾದ ಸೇವಿಸಿದ ಇಷ್ಟೊಂದು ಸಂಖ್ಯೆಯ ಭಕ್ತರು ಅಸ್ವಸ್ಥಗೊಂಡಿರುವುದು ಗ್ರಾಮಸ್ಥರು ಹಾಗೂ ಭಕ್ತರಲ್ಲಿ ಆತಂಕ ಮೂಡಿಸಿದೆ. ಆಹಾರ ವಿಷಬಾಧೆಗೆ ನಿಖರ ಕಾರಣವೇನು ಎಂಬುದು ತನಿಖೆಯ ಬಳಿಕ ತಿಳಿದುಬರಬೇಕಿದೆ.