ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯಿಂದಾಗಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಕನಿಷ್ಠ ನಾಲ್ಕರಿಂದ ಐದು ಮಂದಿ ಅಮಾಯಕರು ಜೀವ ಕಳೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬೆಳ್ಳುಳ್ಳಿ ತುಂಬಿ ಹೊಸಪೇಟೆ ಮಾರ್ಗವಾಗಿ ಚಿತ್ರದುರ್ಗ ಜಿಲ್ಲೆಯ ಕಡೆಗೆ ಲಾರಿಯೊಂದು ವೇಗವಾಗಿ ಸಾಗುತ್ತಿತ್ತು. ಈ ವೇಳೆ ಹನಮನಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಲಾರಿಯು ಬೈಕ್ಗೆ ಗುದ್ದಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಳಿಕ ಆತಂಕಿತನಾದ ಚಾಲಕ, ಲಾರಿಯನ್ನು ವೇಗವಾಗಿ ಮುಂದೆ ಚಲಾಯಿಸಿದ್ದಾನೆ. ಡಣಾಯಕನಕೆರೆ ಗ್ರಾಮದ ಬಳಿಯ ಬಿಎಂಎಂ ಕಾರ್ಖಾನೆ ಬಳಿ ತಲುಪಿದಾಗ ಲಾರಿಯು ಬಸ್ಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸಕ್ಕೆ ಲಾರಿ ಸಂಪೂರ್ಣವಾಗಿ ಫಲ್ಟಿಯಾಗಿ (ತಲೆಕೆಳಗಾಗಿ) ಅಲ್ಲಿದ್ದ ಕಾರಿನ ಮೇಲೆ ಬಿದ್ದು ಪುಡಿಪುಡಿಯಾಗಿದೆ.
ಈ ಘಟನೆಯಲ್ಲಿ ಲಾರಿಯ ಕೆಳಗೆ ಸಿಲುಕಿದ ನಾಲ್ಕೈದು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಮೃತರಲ್ಲಿ ಬೈಕ್ ಸವಾರ ಕೂಡ ಒಬ್ಬನಾಗಿದ್ದಾನೆ. ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಎಸ್. ಜಾಹ್ನವಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಜೆಸಿಬಿ ಸಹಾಯದಿಂದ ಬಿದ್ದ ಲಾರಿಯನ್ನು ಮೇಲೆತ್ತುವ ಕಾರ್ಯ ನಡೆಯುತ್ತಿದೆ.
ಸ್ಥಳದಲ್ಲಿ ಲಾರಿ ತೆರವು ಕಾರ್ಯಾಚರಣೆ ವೀಕ್ಷಿಸಲು ತಂಡೋಪತಂಡವಾಗಿ ಜನರು ಜಮಾಯಿಸಿದ್ದು, ನೆರೆದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಈ ಘಟನೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.