ಕರ್ನಾಟಕ

ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ: ಹುಬ್ಬಳ್ಳಿಯಲ್ಲಿ ಹೆಸ್ಕಾಂ ಎಇಇ ದಂಪತಿಗಳ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ರೇಡ್

ಮೂಲಕ News Desk | ಪ್ರಕಟಿಸಲಾಗಿದೆ September 22, 2026 September 22, 2026 | 05:32 AM 47 ವೀಕ್ಷಣೆಗಳು

ಹುಬ್ಬಳ್ಳಿ: ಬೆಳ್ಳಂಬೆಳಗ್ಗೆ ಹುಬ್ಬಳ್ಳಿಯಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಹೆಸ್ಕಾಂನ ಎಇಇ ದಂಪತಿಗಳಿಗೆ ಸಂಬಂಧಿಸಿದ ಮನೆ ಹಾಗೂ ಕಚೇರಿಗಳು ಸೇರಿದಂತೆ ನಾಲ್ಕು ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.


ಹೆಸ್ಕಾಂನಲ್ಲಿ ಎಇಇ ಆಗಿ ಕಾರ್ಯನಿರ್ವಹಿಸುತ್ತಿರುವ ಕಿರಣಕುಮಾರ ಬೈಂದೂರ ಹಾಗೂ ಅವರ ಪತ್ನಿ ಪ್ರೀತಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.


ದಾಳಿಯ ವೇಳೆ ಮನೆಗಳಲ್ಲಿ ಅಪಾರ ಪ್ರಮಾಣದ ನಗದು, ಚಿನ್ನ, ಬೆಳ್ಳಿ ಹಾಗೂ ವಿವಿಧ ದಾಖಲೆಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿರುವ ವಸ್ತುಗಳು ಹಾಗೂ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.


ಇನ್ನು ಹುಬ್ಬಳ್ಳಿಯ ಅಕ್ಷಯ ಕಾಲೋನಿಯಲ್ಲಿರುವ ಮನೆಯಲ್ಲಿ ಹೆಚ್ಚಿನ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ ಎನ್ನಲಾಗಿದ್ದು, ಚಿನ್ನದ ನಿಖರ ಪ್ರಮಾಣ ಹಾಗೂ ಮೌಲ್ಯವನ್ನು ಪರಿಶೀಲಿಸಲು ಲೋಕಾಯುಕ್ತ ಅಧಿಕಾರಿಗಳು ಗೋಲ್ಡ್‌ಸ್ಮಿತ್ ಅವರನ್ನು ಸ್ಥಳಕ್ಕೆ ಕರೆಸಿ ಆಭರಣಗಳ ತೂಕ ಹಾಗೂ ಲೆಕ್ಕಾಚಾರ ನಡೆಸುತ್ತಿದ್ದಾರೆ.


ನಾಲ್ಕು ಕಡೆ ಏಕಕಾಲಕ್ಕೆ ನಡೆದಿರುವ ಈ ದಾಳಿಯಿಂದ ಹೆಸ್ಕಾಂ ವಲಯದಲ್ಲಿ ಸಂಚಲನ ಮೂಡಿದ್ದು, ಲೋಕಾಯುಕ್ತ ಪರಿಶೀಲನೆ ಪೂರ್ಣಗೊಂಡ ಬಳಿಕ ಎಷ್ಟು ನಗದು, ಚಿನ್ನ, ಬೆಳ್ಳಿ ಹಾಗೂ ಇತರೆ ಆಸ್ತಿಪಾಸ್ತಿಗಳು ಪತ್ತೆಯಾಗಿವೆ ಎಂಬ ಅಧಿಕೃತ ಮಾಹಿತಿ ಹೊರಬರಬೇಕಿದೆ.