ಬೆಂಗಳೂರು: ನವವಿವಾಹಿತೆಯೊಬ್ಬರನ್ನು ಮಾರಕಾಸ್ತ್ರ ತೋರಿಸಿ ಬಲವಂತವಾಗಿ ಅಪಹರಿಸಲು ಯತ್ನಿಸಿದ ಘಟನೆ ಬೆಂಗಳೂರಿನ ಕೆ.ಪಿ. ಅಗ್ರಹಾರ–ದಾಸರಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಳು ಯುವತಿಯನ್ನು ಕಾರಿನಲ್ಲಿ ಕರೆದೊಯ್ಯುವ ವೇಳೆ ವಾಹನಗಳಿಗೆ ಸರಣಿ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದು, ಘಟನೆಯಿಂದ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ರಾಜಸ್ಥಾನ ಮೂಲದ 21 ವರ್ಷದ ಪೂಜಾ ಎಂಬ ಯುವತಿಯನ್ನು ನಾಲ್ವರು ವ್ಯಕ್ತಿಗಳು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿ ಪರಾರಿಯಾಗುವ ವೇಳೆ ಆರೋಪಿಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, 35ಕ್ಕೂ ಹೆಚ್ಚು ಕಾರುಗಳು ಹಾಗೂ 100ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಹಾನಿಗೊಳಗಾಗಿವೆ ಎಂದು ತಿಳಿದುಬಂದಿದೆ.
ರಾಜಸ್ಥಾನ ನೋಂದಣಿಯ ಕಾರು ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಸುಮಾರು 9 ಕಿಲೋಮೀಟರ್‌ವರೆಗೆ ಕಾರನ್ನು ಬೆನ್ನಟ್ಟಿದ್ದಾರೆ. ಬಳಿಕ ವಿಜಯನಗರ ಹೊಸಹಳ್ಳಿಯ 4ನೇ ಕ್ರಾಸ್ ಬಳಿ ಕಾರನ್ನು ತಡೆದು ಮೂವರು ಆರೋಪಿಗಳನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಬಂಧಿತರನ್ನು ರಾಕೇಶ್, ಕರಣ್ ಹಾಗೂ ಅಯಾನ್ ಎಂದು ಗುರುತಿಸಲಾಗಿದ್ದು, ಕಾರು ಚಾಲನೆ ಮಾಡುತ್ತಿದ್ದ ಸದ್ದಾಂ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಆರೋಪಿಗಳು ಪರಾರಿಯಾಗುವ ವೇಳೆ ಹಲವರಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಅಂತರಜಾತಿ ವಿವಾಹವಾಗಿದ್ದ ಪೂಜಾ ಮತ್ತು ಒಂಪ್ರಕಾಶ್ ಕಳೆದ ಕೆಲ ತಿಂಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಪೂಜಾಳನ್ನು ಮತ್ತೆ ರಾಜಸ್ಥಾನಕ್ಕೆ ಕರೆತರಲು ಸುಪಾರಿ ನೀಡಲಾಗಿತ್ತು ಎಂಬ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾಗಡಿ ರಸ್ತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಂಧಿತರ ವಿಚಾರಣೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಸದ್ದಾಂನ ಪತ್ತೆಗಾಗಿ ಶೋಧ ಮುಂದುವರಿದಿದೆ.