ಬೆಂಗಳೂರು ಗ್ರಾಮಾಂತರ:ದೊಡ್ಡಬಳ್ಳಾಪುರದ SGS ಲಾಡ್ಜ್‌ನಲ್ಲಿ ಗಂಡನೇ ಹೆಂಡತಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಡ್ಜ್‌ನ ಸಿಸಿ ಟಿವಿ ದೃಶ್ಯಗಳು ಲಭ್ಯವಾಗಿವೆ.
ಸೆಪ್ಟೆಂಬರ್ 15ರ ರಾತ್ರಿ ಗಂಡ-ಹೆಂಡತಿ ಎನ್ನಲಾದ ಆನಂದ ಮತ್ತು ವಿದ್ಯಾ ಲಾಡ್ಜ್‌ಗೆ ಆಗಮಿಸಿದ್ದಾರೆ. ಕೈಯಲ್ಲಿ ಊಟದ ಪಾರ್ಸಲ್ ಹಿಡಿದು ಬಂದಿದ್ದ ದಂಪತಿ, ನಗು ನಗುತ್ತಲೇ ಲಾಡ್ಜ್‌ನೊಳಗೆ ಪ್ರವೇಶಿಸಿ ಬಳಿಕ ರೂಂಗೆ ತೆರಳಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ರಾತ್ರಿ 11:48ರ ಸುಮಾರಿಗೆ ಇಬ್ಬರೂ ರೂಂ ಪ್ರವೇಶಿಸಿದ್ದು, ಬಳಿಕ ಸುಮಾರು ರಾತ್ರಿ 1 ಗಂಟೆ ವೇಳೆಗೆ ಆನಂದ ಒಬ್ಬನೇ ರೂಂನಿಂದ ಹೊರಗೆ ಬಂದಿದ್ದಾನೆ ಎನ್ನಲಾಗಿದೆ. ಹೊರಗೆ ಬಂದ ಬಳಿಕ ರೂಂಗೆ ಹೊರಗಿನಿಂದಲೇ ಬೀಗ ಹಾಕಿಕೊಂಡು, ಕೀಯನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ರೂಂಗೆ ಹೊರಗಿನಿಂದ ಬೀಗ ಹಾಕಿರುವುದನ್ನು ಗಮನಿಸಿದ ಲಾಡ್ಜ್ ಸಿಬ್ಬಂದಿ, ಒಳಗೆ ಲಗೇಜ್ ಇರಬಹುದು ಎಂದು ಭಾವಿಸಿ ತಕ್ಷಣ ಅನುಮಾನ ವ್ಯಕ್ತಪಡಿಸಿರಲಿಲ್ಲ. ಆದರೆ 24 ಗಂಟೆಗಳ ಅವಧಿ ಮುಗಿದ ಬಳಿಕವೂ ರೂಂ ತೆರೆಯದ ಹಿನ್ನೆಲೆಯಲ್ಲಿ ಸಿಬ್ಬಂದಿ ಆನಂದನಿಗೆ ಕರೆ ಮಾಡಿದ್ದಾರೆ. ಈ ವೇಳೆ ಆತನ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಗೊತ್ತಾಗಿದೆ.
ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ರೂಂ ಪರಿಶೀಲಿಸಿದಾಗ ವಿದ್ಯಾ ಕೊಲೆಯಾಗಿರುವುದು ಪತ್ತೆಯಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೊಲೆಯಾದ ವಿದ್ಯಾ ಪಾಸ್ಕಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೊಲೆ ಆರೋಪಿ ಎನ್ನಲಾಗುತ್ತಿರುವ ಆನಂದ ರಾಜಾನುಕುಂಟೆಯ ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಘಟನೆ ಬಳಿಕ ಆನಂದ ನಾಪತ್ತೆಯಾಗಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕೊಲೆಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಸಿಸಿ ಟಿವಿ ದೃಶ್ಯಗಳು ಹಾಗೂ ಇತರ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.