ಹುಬ್ಬಳ್ಳಿ ಬ್ರೇಕಿಂಗ್
ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಹಾಗೂ ಸುಳ್ಳ ಗ್ರಾಮಗಳಲ್ಲಿ ಒಂದೇ ರೀತಿಯಲ್ಲಿ ಎಟಿಎಂಗಳಿಗೆ ಕನ್ನ ಹಾಕಿ ₹14 ಲಕ್ಷಕ್ಕೂ ಅಧಿಕ ನಗದು ದೋಚಿರುವ ಘಟನೆ ಬೆಳಕಿಗೆ ಬಂದಿದ್ದು, ಗ್ರಾಮೀಣ ಭಾಗದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬ್ಯಾಹಟ್ಟಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಎಟಿಎಂಗೆ ನುಗ್ಗಿದ ಕಳ್ಳರು, ಶೆಟರ್‌ನ ಲಾಕ್ ಮುರಿದು ಒಳನುಗ್ಗಿ ₹3 ಲಕ್ಷಕ್ಕೂ ಅಧಿಕ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಕೃತ್ಯದ ಬಳಿಕ ಎಟಿಎಂನ ಮುಂಭಾಗ ಹಾಗೂ ಒಳಭಾಗದಲ್ಲಿದ್ದ ಬಹುತೇಕ ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿರುವುದು ಕಂಡುಬಂದಿದೆ.
ಇದೇ ವೇಳೆ ಸುಳ್ಳ ಗ್ರಾಮದಲ್ಲೂ ಎಟಿಎಂ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಸುಮಾರು ₹11 ಲಕ್ಷ ನಗದು ಕಳವಾಗಿರುವುದಾಗಿ ತಿಳಿದುಬಂದಿದೆ. ಅಚ್ಚರಿ ಮೂಡಿಸಿರುವ ಸಂಗತಿಯೆಂದರೆ, ಸುಳ್ಳ ಗ್ರಾಮದ ಎಟಿಎಂ ನಡು ಊರಿನಲ್ಲೇ ಇದ್ದರೂ ಕಳ್ಳರು ಕೃತ್ಯ ಎಸಗಿದ್ದಾರೆ. ಎಟಿಎಂ ಅನ್ನು ಪೂರ್ವಯೋಜಿತವಾಗಿ ಟಾರ್ಗೆಟ್ ಮಾಡಿಕೊಂಡೇ ಕಳ್ಳತನ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಎರಡೂ ಘಟನೆಗಳ ನಡುವೆ ಸಾಮ್ಯತೆ ಕಂಡುಬಂದಿರುವ ಹಿನ್ನೆಲೆಯಲ್ಲಿ, ಒಂದೇ ತಂಡ ಕೃತ್ಯ ಎಸಗಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಗಳಿಗೆ ಇನ್ಸ್‌ಪೆಕ್ಟರ್ ಮುರಗೇಶ ಚೆನ್ನಣ್ಣನವರ ನೇತೃತ್ವದಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಕೂಡ ಸ್ಥಳಕ್ಕೆ ತೆರಳಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ.
ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸಿಸಿಟಿವಿ ದೃಶ್ಯಗಳು ಹಾಗೂ ಲಭ್ಯವಿರುವ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.