ಕ್ರೈಂ

ಇನ್‌ಸ್ಟಾಗ್ರಾಂನಲ್ಲಿ ಕೈಯಲ್ಲಿ ಚಾಕು ಹಿಡಿದು ಪೋಸ್ಟ್; ಯುವಕನ ಬಂಧನ

ಮೂಲಕ News Desk | ಪ್ರಕಟಿಸಲಾಗಿದೆ September 7, 2026 September 7, 2026 | 12:58 PM 104 ವೀಕ್ಷಣೆಗಳು


ಹುಬ್ಬಳ್ಳಿ: ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವ ರೀತಿಯಲ್ಲಿ ಕೈಯಲ್ಲಿ ಚಾಕು ಹಿಡಿದು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ/ಚಿತ್ರ ಪೋಸ್ಟ್ ಮಾಡಿದ್ದ ಯುವಕನನ್ನು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಬಂಧಿಸಿದ್ದಾರೆ.

ಹಳೆಹುಬ್ಬಳ್ಳಿ ಈಶ್ವರನಗರದ 4ನೇ ಕ್ರಾಸ್‌ನಲ್ಲಿ ಗಂಗಾಧರ ತಂದೆ ಆನಂದ ಮಡಿವಾಳರ್ ಎಂಬಾತ ಸಾರ್ವಜನಿಕ ಸ್ಥಳದಲ್ಲಿ ಕೈಯಲ್ಲಿ ಚಾಕು ಹಿಡಿದುಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟುಮಾಡುವ ರೀತಿಯಲ್ಲಿ ವರ್ತಿಸಿದ್ದಾನೆ. ಅಲ್ಲದೆ, ತನ್ನ ‘the_jeeva_007’ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಾಕು ಹಿಡಿದಿರುವ ವಿಡಿಯೋ/ಚಿತ್ರವನ್ನು ಪೋಸ್ಟ್ ಮಾಡಿದ್ದಾನೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 77/2026ರಲ್ಲಿ ಭಾರತೀಯ ಆಯುಧ ಕಾಯ್ದೆ-1959ರ ಕಲಂ 27(1) ಹಾಗೂ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 351(2), ಸಹಕಲಂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದು, ಆತನಿಂದ ಒಂದು ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಆಂಟಿ ಸ್ಟ್ಯಾಬಿಂಗ್ ಸ್ಕ್ವಾಡ್‌ನ ಅಧಿಕಾರಿ ಎಎಸ್‌ಐ ಎಸ್.ಜಿ. ವಡ್ಡರ್ ಹಾಗೂ ಸಿಬ್ಬಂದಿಯ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾರಕ ಆಯುಧ ಪ್ರದರ್ಶಿಸಿ ಭಯದ ವಾತಾವರಣ ಸೃಷ್ಟಿಸುವವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದಕ್ಕೆ ಈ ಕಾರ್ಯಾಚರಣೆ ಮತ್ತೊಂದು ಉದಾಹರಣೆಯಾಗಿದೆ.