ಕರ್ನಾಟಕ

ಪೊಲೀಸ್ ಕಮಿಷನರ್ ಆಕ್ಟಿವ್: ಹುಬ್ಬಳ್ಳಿ-ಧಾರವಾಡದಲ್ಲಿ ಹೊಸ ಆಯಾಮದ ಚೆಕಿಂಗ್!

ಮೂಲಕ News Desk | ಪ್ರಕಟಿಸಲಾಗಿದೆ September 6, 2026 September 6, 2026 | 03:15 PM 86 ವೀಕ್ಷಣೆಗಳು

ಬಸ್‌–ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರಗಳಿಗಾಗಿ ತೀವ್ರ ತಪಾಸಣೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಪೊಲೀಸ್ ಇಲಾಖೆ ಇದೀಗ ಹೊಸ ಮಾದರಿಯ ತಪಾಸಣಾ ಕಾರ್ಯಾಚರಣೆಗೆ ಮುಂದಾಗಿದೆ.


ಪೊಲೀಸ್ ಕಮಿಷನರ್ ಅವರ ಸೂಚನೆಯಂತೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಆ್ಯಂಟಿ-ಸ್ಟ್ಯಾಬಿಂಗ್ ಸ್ಕ್ವಾಡ್‌ಗಳನ್ನು ಸಕ್ರಿಯಗೊಳಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಮಾರಕಾಸ್ತ್ರಗಳ ಸಾಗಾಟದ ಮೇಲೆ ನಿಗಾ ವಹಿಸಲಾಗುತ್ತಿದೆ.

ವಿಶೇಷವಾಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಜನದಟ್ಟಣೆ ಇರುವ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ವ್ಯಕ್ತಿಗಳು ಯಾವುದೇ ಚಾಕು, ಕತ್ತಿ ಸೇರಿದಂತೆ ಮಾರಕಾಸ್ತ್ರಗಳನ್ನು ಅಕ್ರಮವಾಗಿ ಹೊಂದಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.


ತಪಾಸಣೆ ವೇಳೆ ಅಕ್ರಮವಾಗಿ ಮಾರಕಾಸ್ತ್ರ ಪತ್ತೆಯಾದಲ್ಲಿ, ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.


ಈ ಕಾರ್ಯಾಚರಣೆಯ ಭಾಗವಾಗಿ ಇಂದು ಇದುವರೆಗೆ 215 ವಾಹನಗಳನ್ನು ಪರಿಶೀಲಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ತಪಾಸಣಾ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ.


ಹೊಸ ಮಾದರಿಯ ಈ ಕಾರ್ಯಾಚರಣೆಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಜೊತೆಗೆ, ಮಾರಕಾಸ್ತ್ರಗಳ ಅಕ್ರಮ ಸಾಗಾಟ ಹಾಗೂ ಬಳಕೆಯನ್ನು ನಿಯಂತ್ರಿಸುವ ಉದ್ದೇಶವನ್ನು ಪೊಲೀಸ್ ಇಲಾಖೆ ಹೊಂದಿದೆ.


ಪೊಲೀಸ್ ಕಮಿಷನರ್ ಅವರ ಈ ಕ್ರಮಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದು, ಅವಳಿ ನಗರದ ಸುರಕ್ಷತೆ ಮತ್ತಷ್ಟು ಬಲಪಡಿಸುವ ನಿರೀಕ್ಷೆ ಮೂಡಿದೆ.