ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಹುಬ್ಬಳ್ಳಿಯ ತೋಳನಕೆರೆ ಉದ್ಯಾನವನದಲ್ಲಿ ನಿರ್ವಹಣಾ ಲೋಪದ ಆರೋಪ ಕೇಳಿಬಂದಿದೆ. ನಿನ್ನೆ ಸಂಜೆ ಉದ್ಯಾನವನದಲ್ಲಿ ನಡೆದಾಡುತ್ತಿದ್ದ ಹಿರಿಯ ನಾಗರಿಕರೊಬ್ಬರು ಏರುಪೇರಾಗಿರುವ ಟೈಲ್ಸ್‌ಗೆ ಕಾಲು ತಾಗಿ ಎಡವಿ ಬಿದ್ದು, ಮುಖ ಹಾಗೂ ಬಾಯಿಗೆ ಗಾಯ ಮಾಡಿಕೊಂಡಿರುವ ಘಟನೆ ನಡೆದಿದೆ.
ಉದ್ಯಾನವನದಲ್ಲಿ ಸಾರ್ವಜನಿಕರ ಓಡಾಟಕ್ಕಾಗಿ ಅಳವಡಿಸಿರುವ ಕೆಲವು ಟೈಲ್ಸ್‌ಗಳು ಸಮತಟ್ಟಾಗದೆ ಅಲ್ಲಲ್ಲಿ ಮೇಲೆ-ಕೆಳಗೆ ಆಗಿರುವುದು ಕಂಡುಬಂದಿದೆ. ಇದೇ ಕಾರಣಕ್ಕೆ ಹಿರಿಯ ನಾಗರಿಕರು ನಡೆದಾಡುವ ಸಂದರ್ಭದಲ್ಲಿ ಕಾಲು ಟೈಲ್ಸ್‌ಗೆ ತಾಗಿ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಹಿರಿಯ ನಾಗರಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಉದ್ಯಾನವನದಲ್ಲಿ ಇಂತಹ ಲೋಪದೋಷಗಳು ಮುಂದುವರಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.
ತೋಳನಕೆರೆ ಉದ್ಯಾನವನಕ್ಕೆ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಪ್ರತಿದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ. ಹೀಗಾಗಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಉದ್ಯಾನವನದಲ್ಲಿರುವ ಏರುಪೇರು ಟೈಲ್ಸ್‌ಗಳು ಸೇರಿದಂತೆ ಎಲ್ಲಾ ಲೋಪದೋಷಗಳನ್ನು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಪರಿಶೀಲಿಸಿ ದುರಸ್ತಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ರತಿಷ್ಠಿತ ಉದ್ಯಾನವನದಲ್ಲಿ ಮೂಲಸೌಕರ್ಯಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಮತ್ತೊಂದು ಅಪಘಾತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳ
ಬೇಕಾಗಿದೆ.