ಇಂಡಿಯಾ

ನ್ಯಾಯ ಬೆಲೆ ಅಂಗಡಿಗಳಲ್ಲಿ ಅನ್ಯಾಯ: ರೇಷನ್ ಬದಲು ಹಣ?

ಮೂಲಕ News Desk | ಪ್ರಕಟಿಸಲಾಗಿದೆ August 20, 2026 August 20, 2026 | 07:35 AM 7 ವೀಕ್ಷಣೆಗಳು


ಹುಬ್ಬಳ್ಳಿ: ಸರ್ಕಾರ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ನೀಡುವ ಪಡಿತರ ವ್ಯವಸ್ಥೆಯಲ್ಲೇ ಅಕ್ರಮ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಹುಬ್ಬಳ್ಳಿಯ ಕೆಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಅರ್ಹ ಗ್ರಾಹಕರಿಗೆ ನಿಯಮಾನುಸಾರ ಪಡಿತರ ವಿತರಿಸುವ ಬದಲು, ಪಡಿತರ ಚೀಟಿಯಲ್ಲಿ ವಿತರಣೆ ತೋರಿಸಿ, ರೇಷನ್ ಧಾನ್ಯಗಳ ಬದಲಿಗೆ ಹಣ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಸರ್ಕಾರದಿಂದ ಉಚಿತ ಅಥವಾ ಸಬ್ಸಿಡಿ ದರದಲ್ಲಿ ನೀಡಲಾಗುವ ಅಕ್ಕಿ ಹಾಗೂ ಇತರ ಧಾನ್ಯಗಳು ನಿಜವಾದ ಫಲಾನುಭವಿಗಳಿಗೆ ತಲುಪಬೇಕಾಗಿದೆ. ಆದರೆ, ಕೆಲವು ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿ ಅಕ್ರಮ ನಡೆಯುತ್ತಿದ್ದು, ಸರ್ಕಾರದ ಧಾನ್ಯಗಳನ್ನು ಬೇರೆಡೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಇದರಿಂದ ಹಲವು ಪ್ರಶ್ನೆಗಳು ಉದ್ಭವಿಸಿವೆ. ನ್ಯಾಯ ಬೆಲೆ ಅಂಗಡಿಗಳಲ್ಲಿ ನಡೆಯುತ್ತಿರುವ ಈ ಅಕ್ರಮ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ನಿಯಮ ಉಲ್ಲಂಘನೆ ನಡೆಯುತ್ತಿದ್ದರೆ, ಸಂಬಂಧಪಟ್ಟ ಅಂಗಡಿಗಳ ವಿರುದ್ಧ ಇದುವರೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಅಷ್ಟೇ ಅಲ್ಲದೆ, ಈ ಅಕ್ರಮಕ್ಕೆ ಅಧಿಕಾರಿಗಳ ಮಟ್ಟದಲ್ಲಿ ಯಾವುದೇ ರೀತಿಯ ಸಹಕಾರ ಅಥವಾ ನಿರ್ಲಕ್ಷ್ಯವಿದೆಯೇ ಎಂಬ ಅನುಮಾನಗಳೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ. ಆದರೆ ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಸ್ಪಷ್ಟನೆ ಪಡೆಯುವುದು ಅಗತ್ಯವಾಗಿದೆ.

ಹುಬ್ಬಳ್ಳಿಯಲ್ಲಿ ಯಾವ ಯಾವ ನ್ಯಾಯ ಬೆಲೆ ಅಂಗಡಿಗಳಲ್ಲಿ ಈ ರೀತಿಯ ಅಕ್ರಮ ನಡೆಯುತ್ತಿದೆ? ಇದರ ಹಿಂದೆ ಯಾರು ಇದ್ದಾರೆ? ಪಡಿತರ ಧಾನ್ಯಗಳು ಎಲ್ಲಿ ಹೋಗುತ್ತಿವೆ? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ಈ ಆರೋಪಗಳಿಗೆ ಸಂಬಂಧಿಸಿದ ವಿಡಿಯೋ ದಾಖಲೆಗಳು ಹಾಗೂ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಮುಂದಿನ ವರದಿಯಲ್ಲಿ ಮತ್ತಷ್ಟು ವಿವರಗಳನ್ನು ಬಹಿರಂಗಪಡಿಸಲಾಗುವುದು.