ಧಾರವಾಡ: ಗಣೇಶ ಹಬ್ಬದ ವೇಳೆ ಮಿತಿ ಮೀರಿ ಡಿಜೆ ಸೌಂಡ್ ಸಿಸ್ಟಮ್ ಬಳಸಿದರೆ 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಗಣೇಶ ವಿಗ್ರಹಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಿಓಪಿ ವಿಗ್ರಹಗಳು ಕಂಡುಬಂದರೆ ಜಪ್ತಿ ಮಾಡಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಗಣೇಶ ಹಬ್ಬದ ವೇಳೆ ಡಿಜೆ ಬದಲಿಗೆ ಡೊಳ್ಳು ಕುಣಿತ, ಹೆಜ್ಜೆ ಮೇಳ, ಕರಡಿ ಮಜಲು ಸೇರಿದಂತೆ ಸಾಂಪ್ರದಾಯಿಕ ಕಲೆಗಳಿಗೆ ಪ್ರೋತ್ಸಾಹ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಪಿಓಪಿ ವಿಗ್ರಹಗಳ ಅಕ್ರಮ ಸಾಗಾಟ ತಡೆಯಲು ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ.
ಹು-ಧಾ ಮಹಾನಗರ ಪಾಲಿಕೆಯಿಂದ ಮಣ್ಣಿನ ಗಣಪತಿ ತಯಾರಕರಿಗೆ 25 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಸಾರ್ವಜನಿಕರು ಪರಿಸರ ಸ್ನೇಹಿ ಮಣ್ಣಿನ ಗಣಪತಿ ಬಳಸಿ, ನಿಯೋಜಿತ ನೀರಿನ ತೊಟ್ಟಿಗಳಲ್ಲೇ ವಿಸರ್ಜನೆ ಮಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.