ಕರ್ನಾಟಕ

ಗುರು ರಾಘವೇಂದ್ರ ಸ್ವಾಮಿಗಳ ಪವಾಡವೇ? 7 ತಿಂಗಳ ಬಳಿಕ ಮತ್ತೆ ನಡೆದಾಡಿದ ಮೆಡಿಕಲ್ ವಿದ್ಯಾರ್ಥಿನಿ!

ಮೂಲಕ News Desk | ಪ್ರಕಟಿಸಲಾಗಿದೆ August 16, 2026 August 16, 2026 | 05:03 AM 24 ವೀಕ್ಷಣೆಗಳು


ಹಾವೇರಿ: ಅಪರೂಪದ ಆಟೋಇಮ್ಯೂನ್ ಸಮಸ್ಯೆಯಿಂದ ಕಳೆದ ಏಳು ತಿಂಗಳಿಂದ ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ 22 ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬರು ಇದೀಗ ಮತ್ತೆ

ಸ್ವತಂತ್ರವಾಗಿ ನಡೆಯುವಂತಾಗಿದ್ದಾರೆ.


ಈ ಚೇತರಿಕೆಯನ್ನು ಕುಟುಂಬಸ್ಥರು ಗುರು ರಾಘವೇಂದ್ರ ಸ್ವಾಮಿಗಳ ಕೃಪೆ ಹಾಗೂ ಆಶೀರ್ವಾದ ಎಂದು ನಂಬಿದ್ದಾರೆ.

ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ನಿವೇದಿತಾ ಶಿವಪ್ಪ ನೆಗಳೂರು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಕಳೆದ ಏಳು ತಿಂಗಳಿಂದ ಪದೇಪದೇ ಮೂರ್ಚೆ ಹೋಗುವುದು, ಕೈ-ಕಾಲುಗಳ ಸ್ವಾಧೀನ ಕಳೆದುಕೊಳ್ಳುವುದು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ತೀವ್ರ ತೊಂದರೆಯಿಂದಾಗಿ ಅವರು ವೀಲ್‌ಚೇರ್‌ ಆಶ್ರಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.


ಹಾವೇರಿ ಹಾಗೂ ಹುಬ್ಬಳ್ಳಿಯ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ನಿರೀಕ್ಷಿತ ಮಟ್ಟದ ಚೇತರಿಕೆ ಕಂಡುಬಂದಿರಲಿಲ್ಲ. ಚಿಕಿತ್ಸೆಗಾಗಿ ಕುಟುಂಬಸ್ಥರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದರೂ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಕುಟುಂಬವು ಆಧ್ಯಾತ್ಮಿಕ ಮಾರ್ಗದ ಮೊರೆ ಹೋಯಿತು.


ಈ ಸಂದರ್ಭದಲ್ಲಿ ಕುಟುಂಬಸ್ಥರು ಹೊಸರಿತ್ತಿ ರಾಯರ ಮಠಕ್ಕೆ ತೆರಳಿದ್ದರು. ಅಲ್ಲಿ 100ನೇ ಸುಶೀಲೇಂದ್ರತೀರ್ಥ ಆರಾಧನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿಗಳ ಆಶೀರ್ವಾದವನ್ನು ನಿವೇದಿತಾ ಪಡೆದರು. ಸ್ವಾಮೀಜಿಗಳು ಅವರಿಗೆ ರಾಯರ ಮಂತ್ರಾಕ್ಷತೆ ಹಾಗೂ ಭಾವಚಿತ್ರ ನೀಡಿ, ಐದು ವಾರಗಳ ಕಾಲ ಹರಕೆ ನಡೆಸುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.


ಕುಟುಂಬಸ್ಥರ ಪ್ರಕಾರ, ಹರಕೆ ಆರಂಭಿಸಿದ ಕೇವಲ ಮೂರು ವಾರಗಳಲ್ಲೇ ನಿವೇದಿತಾ ಅವರ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ ಕಾಣಿಸಿಕೊಂಡಿತು. ಐದು ವಾರಗಳ ಹರಕೆ ಪೂರ್ಣಗೊಳಿಸಿದ ಬಳಿಕ ಇದೀಗ ಅವರು ಸ್ವತಃ ನಡೆಯುವುದಲ್ಲದೆ ಓಡಾಡುವಂತಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


ಏಳು ತಿಂಗಳ ಕಾಲ ವೀಲ್‌ಚೇರ್‌ನಲ್ಲಿದ್ದ ಮೆಡಿಕಲ್ ವಿದ್ಯಾರ್ಥಿನಿ ಮತ್ತೆ ತನ್ನ ಕಾಲ ಮೇಲೆ ನಿಂತು ನಡೆಯುತ್ತಿರುವುದು ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದೆ. ಈ ಚೇತರಿಕೆಯ ಹಿಂದೆ ಗುರು ರಾಘವೇಂದ್ರ ಸ್ವಾಮಿಗಳ ಕೃಪೆಯೇ ಕಾರಣ ಎಂದು ಕುಟುಂಬಸ್ಥರು ಭಕ್ತಿಭಾವದಿಂದ ನಂಬಿದ್ದಾರೆ.