ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿಆರ್‌ಐ) ನಿರ್ದೇಶಕರ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಜುಲೈ 30ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ಅರ್ಹ ಅಭ್ಯರ್ಥಿಗಳ ಸಂದರ್ಶನ ನಡೆಯಲಿದ್ದು, ಆಯ್ಕೆ ಸಮಿತಿ ನೂತನ ನಿರ್ದೇಶಕರ ಆಯ್ಕೆಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಪ್ರಸ್ತುತ ಹೆಚ್ಚುವರಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಕೆ.ಎಫ್. ಕಮ್ಮಾರ್ ಅವರು ಜುಲೈ 31ರಂದು ಸೇವೆಯಿಂದ ನಿವೃತ್ತಿಯಾಗಲಿರುವ ಹಿನ್ನೆಲೆಯಲ್ಲಿ, ಖಾಯಂ ನಿರ್ದೇಶಕರ ನೇಮಕಾತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಹೈಕೋರ್ಟ್ ನಿರ್ದೇಶನದಂತೆ ಪೂರ್ಣಾವಧಿಯ ನಾಲ್ಕು ವರ್ಷಗಳ ಅವಧಿಗೆ ನಿರ್ದೇಶಕರನ್ನು ನೇಮಕ ಮಾಡಬೇಕಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ನಿರ್ದೇಶಕ ಹುದ್ದೆಗೆ ಒಟ್ಟು 17 ಮಂದಿ ಹಿರಿಯ ವೈದ್ಯರು ಅರ್ಜಿ ಸಲ್ಲಿಸಿದ್ದರು. ದಾಖಲೆಗಳ ಪರಿಶೀಲನೆಯ ಬಳಿಕ ಆಡಳಿತಾಧಿಕಾರಿಗಳು 10 ಮಂದಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಿದ್ದಾರೆ. ಈ ಆಯ್ಕೆ ಪ್ರಕ್ರಿಯೆ ಕೆಎಂಸಿಆರ್‌ಐ ಆಡಳಿತದಲ್ಲಿ ಮಹತ್ವದ ಘಟ್ಟವೆಂದು ಪರಿಗಣಿಸಲಾಗಿದೆ.
ಸಂದರ್ಶನವನ್ನು ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾದ ಆಯ್ಕೆ ಸಮಿತಿ ನಡೆಸಲಿದೆ. ಸಮಿತಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕೆಎಂಸಿಆರ್‌ಐ ಆಡಳಿತಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಬಾರಿ ನಿರ್ದೇಶಕರ ನೇಮಕಾತಿ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದು, ಅಧಿಸೂಚನೆಯಲ್ಲಿ ಸೇವಾವಧಿಗೆ ಸಂಬಂಧಿಸಿದ ಷರತ್ತುಗಳ ಕಾರಣ ನಿವೃತ್ತಿಯ ಸಮೀಪದಲ್ಲಿರುವ ಕೆಲ ಹಿರಿಯ ವೈದ್ಯರೂ ಅರ್ಜಿ ಸಲ್ಲಿಸಿರುವುದು ಗಮನ ಸೆಳೆದಿದೆ. ಸಂದರ್ಶನದ ಬಳಿಕ ಸರ್ಕಾರ ನೂತನ ನಿರ್ದೇಶಕರ ಹೆಸರನ್ನು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.
ಕೆಎಂಸಿಆರ್‌ಐ ಆಡಳಿತದ ಮುಂದಿನ ನಾಲ್ಕು ವರ್ಷಗಳ ದಿಕ್ಕನ್ನು ನಿರ್ಧರಿಸುವ ಈ ನೇಮಕಾತಿ ವೈದ್ಯಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದು, ಯಾರು ನೂತನ ನಿರ್ದೇಶಕರಾಗಿ ಆಯ್ಕೆಯಾಗುತ್ತಾರೆ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.