ಕರ್ನಾಟಕ

ಪ್ರವಾಸದ ವೇಳೆ ದುರಂತ: ಪುರಾತನ ಬಾವಿಗೆ ಕಾಲು ಜಾರಿ ಬಿದ್ದು 10 ವರ್ಷದ ಬಾಲಕ ಸಾವು

ಮೂಲಕ News Desk | ಪ್ರಕಟಿಸಲಾಗಿದೆ July 20, 2026 July 20, 2026 | 09:59 AM 20 ವೀಕ್ಷಣೆಗಳು


ವಿಜಯನಗರ: ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದ 10 ವರ್ಷದ ಬಾಲಕ ಪುರಾತನ ಬಾವಿಗೆ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬಾಗಳಿಯ ಶ್ರೀ ಕಲ್ಲೇಶ್ವರ ದೇಗುಲದ ಸಮೀಪ ಭಾನುವಾರ ನಡೆದಿದೆ.ಮೃತ ಬಾಲಕನನ್ನು ವಿಷ್ಣು (10) ಎಂದು ಗುರುತಿಸಲಾಗಿದೆ. ಆತ ಹರಪನಹಳ್ಳಿಯ ಗಾಜಿನಕೇರಿಯ ನಿವಾಸಿಗಳಾದ ವಿನೋದ್ ಹಾಗೂ ವಿದ್ಯಾ ದಂಪತಿಯ ಪುತ್ರನಾಗಿದ್ದಾನೆ.

ಕುಟುಂಬ ಸದಸ್ಯರು ಭಾನುವಾರ ಪ್ರವಾಸದ ನಿಮಿತ್ತ ಬಾಗಳಿಯ ಶ್ರೀ ಕಲ್ಲೇಶ್ವರ ದೇಗುಲಕ್ಕೆ ತೆರಳಿದ್ದ ವೇಳೆ, ಆಟವಾಡುತ್ತಿದ್ದ ವಿಷ್ಣು ಅಜಾಗರೂಕತೆಯಿಂದ ಪುರಾತನ ಬಾವಿಯ ಬಳಿ ಹೋಗಿದ್ದಾನೆ. ಈ ವೇಳೆ ಕಾಲು ಜಾರಿ ಬಾವಿಗೆ ಬಿದ್ದಿದ್ದು, ಸ್ಥಳದಲ್ಲಿದ್ದವರು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಮುಂದಾದರು. ಬಳಿಕ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಘಟನಾ ಸ್ಥಳಕ್ಕೆ ಆಗಮಿಸಿದ ಹರಪನಹಳ್ಳಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಬಾಲಕನನ್ನು ಬಾವಿಯಿಂದ ಹೊರತೆಗೆದರು. ಆದರೆ ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿರುವುದು ದೃಢಪಟ್ಟಿತು.

ಈ ದುರ್ಘಟನೆಯಿಂದ ಮೃತ ಬಾಲಕನ ತಂದೆ-ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಈ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.