ನವದೆಹಲಿ/ಬೆಂಗಳೂರು: ಪರಿಸರ ಸ್ನೇಹಿ ಬಟ್ಟೆಯ ಕೈಚೀಲಗಳ ಖರೀದಿ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂಪಾಯಿಗಳ ಅಕ್ರಮ ಆರೋಪದ ಮೇರೆಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ದೀಪಂಕರ ದತ್ತ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಸೋಮವಾರ ಈ ಮಧ್ಯಂತರ ತಡೆಯಾಜ್ಞೆ ಹೊರಡಿಸಿದೆ. ರೋಹಿಣಿ ಸಿಂಧೂರಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ವೇಳೆ ಈ ಆದೇಶವನ್ನು ನೀಡಲಾಗಿದೆ.
ಪ್ರಕರಣದ ಪ್ರತಿವಾದಿಗಳಾದ ಕರ್ನಾಟಕ ಸರ್ಕಾರ ಮತ್ತು ಎನ್.ಆರ್. ರವಿಚಂದ್ರೇಗೌಡ ಅವರಿಗೆ ನ್ಯಾಯಪೀಠವು ನೋಟಿಸ್ ಜಾರಿಗೊಳಿಸಿದೆ. ಮುಂದಿನ ವಿಚಾರಣೆ ವೇಳೆಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಹೈಕೋರ್ಟ್ನ ಆದೇಶದ ಮೂಲಕ ರೋಹಿಣಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಬೇಕೆಂದು ಕರ್ನಾಟಕ ಸರ್ಕಾರಕ್ಕೆ ಸೂಚಿಸಲಾಗಿತ್ತು. ಆದರೆ, ಈಗ ಸುಪ್ರೀಂ ಕೋರ್ಟ್ನ ತಡೆಯಾಜ್ಞೆಯಿಂದಾಗಿ ಆ ತನಿಖೆ ಪ್ರಕ್ರಿಯೆಗೆ ಮೊದಲ ಹಂತದಲ್ಲೇ ತಡೆಯೊಡ್ಡಿದಂತಾಗಿದೆ.
ವರದಿ: ಪಬ್ಲಿಕ್ ರೈಡ್ ದೇವರಾಜ್