ಕ್ರೈಂ

ಹಣದ ವಿಚಾರಕ್ಕೆ ಹಲ್ಲೆ: ಬೀದಿಬದಿ ವ್ಯಾಪಾರಿ ಸಾವು, ನಾಲ್ವರು ಆರೋಪಿಗಳು ಪರಾರಿ

ಮೂಲಕ News Desk | ಪ್ರಕಟಿಸಲಾಗಿದೆ July 2, 2026 July 2, 2026 | 05:40 AM 129 ವೀಕ್ಷಣೆಗಳು

ಹಾವೇರಿ:ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಹಲ್ಲೆಯಲ್ಲಿ ಬೀದಿಬದಿ ವ್ಯಾಪಾರಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದ್ದು, ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಮೃತರನ್ನು ರಟ್ಟಿಹಳ್ಳಿ ಪಟ್ಟಣದ ನಿವಾಸಿ ಶಿವಾಜಿರಾವ್ ಬೈರೋಜಿ (55) ಎಂದು ಗುರುತಿಸಲಾಗಿದೆ.


ಪೊಲೀಸರ ಮಾಹಿತಿ ಪ್ರಕಾರ, ಶಿವಾಜಿರಾವ್ ಅವರ ಬೀದಿಬದಿ ಅಂಗಡಿಗೆ ನಾಲ್ವರು ಯುವಕರು ಮೊಟ್ಟೆ ಖರೀದಿಸಲು ಬಂದಿದ್ದರು. ಈ ವೇಳೆ ಹಣದ ಚಿಲ್ಲರೆ (ಚೇಂಜ್) ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಆರೋಪಿಗಳಲ್ಲಿ ಒಬ್ಬನಾದ ವಾಸೀಮ್, ತಾನು ₹500 ನೋಟು ನೀಡಿದ್ದೇನೆ ಎಂದು ಹೇಳಿದ್ದರೆ, ವ್ಯಾಪಾರಿಯ ಮಗ ₹100 ಮಾತ್ರ ನೀಡಲಾಗಿದೆ ಎಂದು ಪ್ರತಿಪಾದಿಸಿದ್ದಾನೆ.

ಈ ವಿಚಾರವಾಗಿ ಗಲಾಟೆ ತೀವ್ರಗೊಂಡಿದ್ದು, ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಶಿವಾಜಿರಾವ್ ಅವರ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.


ಹಲ್ಲೆಯ ವೇಳೆ ಎದೆಗೆ ಕಾಲಿನಿಂದ ಒದ್ದಿರುವ ಆರೋಪ ಕೇಳಿಬಂದಿದ್ದು, ಗಂಭೀರವಾಗಿ ಗಾಯಗೊಂಡ ಶಿವಾಜಿರಾವ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸೀಮ್ ಮುಲ್ಲಾ, ಸರ್ಫರಾಜ್ ಮುಲ್ಲಾ, ಸಾದಿಕ್ ಮುಲ್ಲಾ ಹಾಗೂ ಶಿರಾಜ್ ಮುಲ್ಲಾ ವಿರುದ್ಧ ಆರೋಪ ಕೇಳಿಬಂದಿದ್ದು, ಘಟನೆ ಬಳಿಕ ನಾಲ್ವರೂ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮೃತರ ಪುತ್ರ ಭರತ್ ನೀಡಿದ ದೂರಿನ ಮೇರೆಗೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಐಜಿಪಿ ರವಿಕಾಂತೇಗೌಡ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಈ ಘಟನೆ ಹಿನ್ನೆಲೆಯಲ್ಲಿ ರಟ್ಟಿಹಳ್ಳಿ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.