ಕರ್ನಾಟಕ

BIS ಪ್ರಮಾಣೀಕೃತ ಉತ್ಪನ್ನಗಳನ್ನೇ ಬಳಸಿ, ಸುರಕ್ಷಿತ ಜೀವನ ನಡೆಸಿ: ಡಾ. ನಾಗರಾಜು ಕೆ.ಸಿ.ಹುರುಳಿಹಳ್ಳಿಯಲ್ಲಿ BIS ವತಿಯಿಂದ SHINE ಜಾಗೃತಿ ಕಾರ್ಯಕ್ರಮ

ಮೂಲಕ News Desk | ಪ್ರಕಟಿಸಲಾಗಿದೆ July 1, 2026 July 1, 2026 | 08:25 AM 6 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಭಾರತೀಯ ಮಾನಕ ಬ್ಯೂರೋ (BIS), ಬೆಂಗಳೂರು ಶಾಖೆಯ SHINE (Standards Help Inform & Nurture Empowered Women) ಯೋಜನೆಯಡಿ ಜೂನ್ 27, 2026 (ಶನಿವಾರ) ರಂದು ನೆಲಮಂಗಲ ತಾಲ್ಲೂಕಿನ ಹುರುಳಿಹಳ್ಳಿ ಗ್ರಾಮದಲ್ಲಿ ಮಹಿಳೆಯರಿಗಾಗಿ ಗ್ರಾಹಕ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ  ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗರಾಜ್ ಕೆ ಸಿ, ಮಾತನಾಡಿ "BIS ಪ್ರಮಾಣೀಕೃತ ಉತ್ಪನ್ನಗಳನ್ನೇ ಬಳಸಿ, ಸುರಕ್ಷಿತ ಜೀವನ ನಡೆಸಿ" ಎಂದು ಕರೆ ನೀಡಿದರು. ಅವರು ಭಾರತೀಯ ಮಾನಕ ಬ್ಯೂರೋ (BIS) ಕಾರ್ಯಚಟುವಟಿಕೆಗಳು, ISI ಗುರುತು, ಹಾಲ್‌ಮಾರ್ಕ್, BIS CARE ಆ್ಯಪ್, ಕಡ್ಡಾಯ BIS ಪ್ರಮಾಣೀಕರಣ ಹೊಂದಿರುವ ಉತ್ಪನ್ನಗಳು, ಗುಣಮಟ್ಟದ ಉತ್ಪನ್ನಗಳ ಆಯ್ಕೆ, ಗ್ರಾಹಕರ ಹಕ್ಕುಗಳು ಹಾಗೂ ಸುರಕ್ಷಿತ ಖರೀದಿಯ ಮಹತ್ವದ ಕುರಿತು ಮಹಿಳೆಯರಿಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಸಬಾ ಹೋಬಳಿ ಅಧ್ಯಕ್ಷ ಶ್ರೀ ರಾಮು ಹುರುಳಿಹಳ್ಳಿ ಉಪಸ್ಥಿತರಿದ್ದು, ಗ್ರಾಹಕರ ಜಾಗೃತಿ ಮತ್ತು ಗುಣಮಟ್ಟದ ಉತ್ಪನ್ನಗಳ ಬಳಕೆಯ ಅಗತ್ಯತೆಯ ಕುರಿತು ಮಾತನಾಡಿದರು.

ಶ್ರೀ ವರಲಕ್ಷ್ಮಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಪಂಕಜ ಅವರ ನೇತೃತ್ವದಲ್ಲಿ 25 ಮಹಿಳಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ BIS ಪ್ರಮಾಣೀಕರಣ, ISI ಗುರುತುಗಳನ್ನು ಗುರುತಿಸುವ ವಿಧಾನ, BIS CARE ಆ್ಯಪ್ ಬಳಕೆ ಹಾಗೂ ಗ್ರಾಹಕರ ಸುರಕ್ಷತೆಯ ಕುರಿತು ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ISI ಗುರುತುಗಳ ಮಾಹಿತಿ ಹೊಂದಿರುವ ಜಾಗೃತಿ ಕಿಟ್‌ಗಳನ್ನು ವಿತರಿಸಲಾಯಿತು.

ಗುಣಮಟ್ಟದ ಉತ್ಪನ್ನಗಳ ಬಳಕೆ, ಮಹಿಳಾ ಸಬಲೀಕರಣ ಹಾಗೂ ಸುರಕ್ಷಿತ ಗ್ರಾಹಕ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ ಮಹಿಳೆಯರು ಹಾಗೂ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.


ವರದಿ : ಪಬ್ಲಿಕ್ ರೈಡ್ ದೇವರಾಜ್