ಹುಬ್ಬಳ್ಳಿ: ಜಾತಿ ನಿಂದನೆ ಮಾಡಿದ್ದು ಹಾಗೂ ಜೀವ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಗಿರೀಶ್ ಗದಿಗೆಪ್ಪಗೌಡರ್ ಹಾಗೂ ಹರ್ಷ ಎಂಬುವರ ವಿರುದ್ಧ ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೇ ಹುಬ್ಬಳ್ಳಿಯ ನಿವಾಸಿ ವಿನಾಯಕ ಜಕ್ಕನೂರು ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಸುಮಾರು ಆರು ತಿಂಗಳ ಹಿಂದೆ ಕೇಶ್ವಾಪುರ ಪೂರ್ವ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದ ವಿಚಾರವಾಗಿ ದೂರುದಾರ ಹಾಗೂ ಆರೋಪಿತರ ನಡುವೆ ವಾಗ್ವಾದ ನಡೆದಿತ್ತು. ಬಳಿಕ ಇತ್ತೀಚೆಗೆ ವಿನಾಯಕ ಜಕ್ಕನೂರು ಅವರು ಗೋಕುಲ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿರುವ ಸಲೂನ್‌ಗೆ ತೆರಳಿದ್ದ ವೇಳೆ ಆರೋಪಿತರು ಅವರನ್ನು ಗುರಾಯಿಸಿ ನೋಡಿದ್ದಲ್ಲದೆ, ಜಾತಿ ಹೆಸರನ್ನು ಉಲ್ಲೇಖಿಸಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಲ್ಲದೆ, "ನನ್ನ ಬಳಿ ಎರಡು ಗನ್‌ಗಳಿವೆ" ಎಂದು ಹೇಳಿ ಜೀವ ಬೆದರಿಕೆ ಹಾಕಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಆಧಾರದ ಮೇಲೆ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ಧ ಸಂಬಂಧಿತ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.