ಕ್ರೈಂ

ಮನೆಯ ಮಾಲೀಕರನ್ನೇ ವಂಚಿಸಿದ ಬಾಡಿಗೆದಾರರು: 45 ಗ್ರಾಂ ಚಿನ್ನ ಕಳವು – ದಂಪತಿ ಬಂಧನ

ಮೂಲಕ News Desk | ಪ್ರಕಟಿಸಲಾಗಿದೆ June 27, 2026 June 27, 2026 | 10:02 AM 82 ವೀಕ್ಷಣೆಗಳು
ಮೈಸೂರು:ಮನೆಯ ಮಾಲೀಕರು ಊರಿಗೆ ತೆರಳಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಬಾಡಿಗೆದಾರರೇ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ನಿವೃತ್ತ ಶಿಕ್ಷಕರಾದ ನಾಗಯ್ಯ ಹಾಗೂ ಮಂಜುಳಾ ಅವರು ಜೂನ್ 13ರಂದು ಮನೆಗೆ ಬೀಗ ಹಾಕಿ ಮೈಸೂರಿಗೆ ತೆರಳಿದ್ದರು. ಈ ವೇಳೆ ಮನೆಯಲ್ಲೇ ಬಾಡಿಗೆಗೆ ವಾಸವಾಗಿದ್ದ ಮಂಜುನಾಥ್ ಮತ್ತು ನಯನ ದಂಪತಿ ಮನೆಗೆ ನುಗ್ಗಿ ಬೀರುವಿನಲ್ಲಿ ಇಡಲಾಗಿದ್ದ ಸುಮಾರು 45 ಗ್ರಾಂ ತೂಕದ ಚಿನ್ನಾಭರಣವನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ.

ಕಳವು ಮಾಡಿದ ಚಿನ್ನಾಭರಣವನ್ನು ಆರೋಪಿಗಳು ಆರ್ಟಿಕ್ ಗೋಲ್ಡ್ ಫೈನಾನ್ಸ್ ಸಂಸ್ಥೆಗೆ ಮಾರಾಟ ಮಾಡಿ ಸುಮಾರು ₹6 ರಿಂದ ₹8 ಲಕ್ಷ ಹಣ ಪಡೆದಿದ್ದು, ಆ ಹಣವನ್ನು ಬಚ್ಚಿಟ್ಟಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಈ ಸಂಬಂಧ ಜೂನ್ 21ರಂದು ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ತಾಂತ್ರಿಕ ಮಾಹಿತಿ ಹಾಗೂ ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳಾದ ಮಂಜುನಾಥ್ ಮತ್ತು ನಯನ ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಕಲೆಹಾಕಲಾಗುತ್ತಿದ್ದು, ಕಳುವಾದ ಚಿನ್ನಾಭರಣ ಹಾಗೂ ಹಣದ ವಶಪಡಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ. ಪ್ರಕರಣದ ಕುರಿತು ಬೈಲುಕೊಪ್ಪ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.