ಧಾರವಾಡ, ಜೂ.25: ಅಂತರರಾಷ್ಟ್ರೀಯ ಮಾದಕ ದ್ರವ್ಯ ದಿನಾಚರಣೆ ಅಂಗವಾಗಿ ಧಾರವಾಡ ಜಿಲ್ಲಾ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಜಪ್ತಪಡಿಸಿದ್ದ ಸುಮಾರು 49 ಕೆ.ಜಿ. 950 ಗ್ರಾಂ ಗಾಂಜಾವನ್ನು ಗುರುವಾರ ನಾಶಪಡಿಸಿದರು.
ಪ್ರಧಾನ ಕಚೇರಿ ಬೆಂಗಳೂರು ನಿರ್ದೇಶನದಂತೆ, ಎನ್‌ಡಿಪಿಎಸ್ (NDPS) ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳಲ್ಲಿ ಜಪ್ತಗೊಂಡ ಮಾದಕ ವಸ್ತುಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ರಚಿಸಲಾದ “ಡ್ರಗ್ ಡಿಸ್ಪೋಸಲ್ ಕಮಿಟಿ” ಸಭೆ ಜೂನ್ 17ರಂದು ನಡೆದಿದ್ದು, ಜಪ್ತ ವಸ್ತುಗಳನ್ನು ನಾಶಪಡಿಸಲು ತೀರ್ಮಾನಿಸಲಾಗಿತ್ತು.
ಅದರಂತೆ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2025 ಹಾಗೂ 2026ನೇ ಸಾಲಿನಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ ಮೂರು ಪ್ರಕರಣಗಳಲ್ಲಿ ಜಪ್ತಗೊಂಡಿದ್ದ ಗಾಂಜಾವನ್ನು (ಮಾದರಿ ಪರೀಕ್ಷೆಗಾಗಿ ಉಳಿಸಿಕೊಂಡ ಪ್ರಮಾಣ ಹೊರತುಪಡಿಸಿ) ನಾಶಪಡಿಸಲಾಯಿತು.
ಹುಬ್ಬಳ್ಳಿ ತಾಲೂಕಿನ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ M/s Rio Green India Ltd (CBMWTF) ಘಟಕದಲ್ಲಿ ಗಾಂಜಾವನ್ನು ಸುಟ್ಟು ನಾಶಪಡಿಸಲಾಯಿತು.
ಈ ವೇಳೆ ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ, ಧಾರವಾಡ ಗ್ರಾಮೀಣ ಉಪವಿಭಾಗದ ಡಿಎಸ್‌ಪಿ ವಿನೋದ ಮುಕ್ತೆದಾರ, ನವಲಗುಂದ ವೃತ್ತದ ಸಿಪಿಐ ರವಿ ಕಪ್ಪತ್ತನವರ ಸೇರಿದಂತೆ ಡ್ರಗ್ ಡಿಸ್ಪೋಸಲ್ ಸಮಿತಿಯ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾದಕ ವಸ್ತುಗಳ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಮುಂದುವರಿಸಿದ್ದು, ಸಮಾಜವನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಹಾಗೂ ಕಾನೂನು ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.