ಕ್ರೈಂ

AI ದುರ್ಬಳಕೆಯಿಂದ ಗೃಹಿಣಿಗೆ ಕಿರುಕುಳ: ₹30 ಲಕ್ಷಕ್ಕೆ ಬೇಡಿಕೆ, ಅವಹೇಳನಕಾರಿ ಪೋಸ್ಟ್‌ಗಳಿಂದ ಆತ್ಮಹತ್ಯೆಗೆ ಯತ್ನ

ಮೂಲಕ News Desk | ಪ್ರಕಟಿಸಲಾಗಿದೆ June 25, 2026 June 25, 2026 | 02:38 AM 144 ವೀಕ್ಷಣೆಗಳು

ಚಿಕ್ಕಮಗಳೂರು: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ದುರ್ಬಳಕೆ ಮೂಲಕ ಗೃಹಿಣಿಯ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.


ಆರೋಪಿಗಳು ಗೃಹಿಣಿಯ ಫೋಟೋಗಳನ್ನು ಮಾರ್ಪಡಿಸಿ ಮೊಬೈಲ್‌ಗೆ ಕಳುಹಿಸಿದ್ದು, ₹30 ಲಕ್ಷ ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹಣ ನೀಡಲು ನಿರಾಕರಿಸಿದ ನಂತರ ಇನ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆ ಸೃಷ್ಟಿಸಿ ಎಡಿಟ್ ಮಾಡಿದ ಫೋಟೋಗಳನ್ನು ಹರಿಬಿಟ್ಟಿರುವ ಆರೋಪ ಕೇಳಿಬಂದಿದೆ.


ಇದಷ್ಟೇ ಅಲ್ಲದೆ, ಗೃಹಿಣಿಯ ಭಾವಚಿತ್ರವನ್ನು ಬಳಸಿ “₹300ಕ್ಕೆ ಲಭ್ಯ” ಎಂಬ ಅವಹೇಳನಕಾರಿ ಬರಹದೊಂದಿಗೆ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪೋಸ್ಟ್‌ಗಳು ವೈರಲ್ ಆಗುತ್ತಿದ್ದಂತೆ ತೀವ್ರ ಮನನೊಂದ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ.


ಈ ಕುರಿತು ಗೃಹಿಣಿಯ ಪತಿ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಾವಿಕೆರೆ ಗ್ರಾಮದ ಅಕ್ಷಯ್ ಹಾಗೂ ಸಾಹುಲ್ ಹಮೀದ್ ವಿರುದ್ಧ ಆರೋಪ ಮಾಡಿದ್ದಾರೆ. ಇದೇ ಆರೋಪಿಗಳು ಈ ಹಿಂದೆ ಮತ್ತೊಬ್ಬ ಮಹಿಳೆಗೆ ಸಹ ಇದೇ ರೀತಿಯ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವೂ ಕೇಳಿಬಂದಿದೆ.


ದೂರಿನೊಂದಿಗೆ ಮೊಬೈಲ್ ಸಂಖ್ಯೆ ಸೇರಿದಂತೆ ಹಲವು ಸಾಕ್ಷ್ಯಾಧಾರಗಳನ್ನು ಪೊಲೀಸರಿಗೆ ಒದಗಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಲಕ್ಕವಳ್ಳಿ ಪೊಲೀಸರು ಆರೋಪಿಗಳ ಪತ್ತೆ ಹಾಗೂ ಬಂಧನಕ್ಕಾಗಿ ಕಾರ್ಯಾಚರಣೆ ಆರಂಭಿಸಿದ್ದು, ತನಿಖೆ ಮುಂದುವರಿದಿದೆ.


AI ತಂತ್ರಜ್ಞಾನದ ದುರ್ಬಳಕೆಯಿಂದ ಮಹಿಳೆಯರ ಗೌರವ ಮತ್ತು ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತಿರುವ ಬಗ್ಗೆ ಈ ಘಟನೆ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಮೊಳಗಿಸಿದೆ.