ಕರ್ನಾಟಕ

ಸೈಕಲ್‌ನಲ್ಲೇ ಕೃಷಿ ಕ್ರಾಂತಿ: ಕಡಿಮೆ ವೆಚ್ಚದಲ್ಲಿ ಕಳೆ ನಿಯಂತ್ರಣಕ್ಕೆ ರೈತನ ಹೊಸ ತಂತ್ರ

ಮೂಲಕ News Desk | ಪ್ರಕಟಿಸಲಾಗಿದೆ June 24, 2026 June 24, 2026 | 07:10 AM 68 ವೀಕ್ಷಣೆಗಳು

ದಾವಣಗೆರೆ: ಕೃಷಿ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ರೈತ ದಂಪತಿಯೊಬ್ಬರು ತಮ್ಮ ಚಾತುರ್ಯದಿಂದ ಹೊಸ ಕೃಷಿ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಹರಿಹರ ತಾಲೂಕಿನ ಎರೆಹೊಸಹಳ್ಳಿ ಗ್ರಾಮದ ರೈತ ಸಂಜೀವಪ್ಪ ರೆಡ್ಡಿ ಮತ್ತು ಅವರ ಪತ್ನಿ, ಬಳಕೆಯಲ್ಲಿರದ ಹಳೆಯ ಸೈಕಲ್‌ಗೆ ಎಡೆಕುಂಟೆ ಅಳವಡಿಸಿ ಮೆಕ್ಕೆಜೋಳದ ಹೊಲದಲ್ಲಿ ಕಳೆ ತೆಗೆಯುವ ಕಾರ್ಯ ನಡೆಸುತ್ತಿದ್ದಾರೆ.


ಎತ್ತುಗಳ ಕೊರತೆ, ಬಾಡಿಗೆ ದರದ ಏರಿಕೆ ಹಾಗೂ ಟ್ರ್ಯಾಕ್ಟರ್‌ಗಳಿಗೆ ಬೇಕಾಗುವ ಡೀಸೆಲ್ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಎರಡು ಎಕರೆ ಪ್ರದೇಶದಲ್ಲಿ ಬೆಳೆದಿರುವ ಮೆಕ್ಕೆಜೋಳದ ಸಾಲುಗಳ ನಡುವೆ ಸೈಕಲ್ ಆಧಾರಿತ ಕುಂಟೆಯನ್ನು ಚಲಾಯಿಸುವ ಮೂಲಕ ಸುಲಭವಾಗಿ ಕಳೆ ನಿಯಂತ್ರಣ ಮಾಡುತ್ತಿದ್ದಾರೆ.


ಈ ವಿಧಾನದಿಂದ ಸಮಯ ಮತ್ತು ಹಣ ಎರಡನ್ನೂ ಉಳಿತಾಯ ಮಾಡಬಹುದು. ಅಲ್ಲದೆ ಸಣ್ಣ ಮತ್ತು ಅಲ್ಪಭೂಧಾರಕ ರೈತರಿಗೆ ಇದು ಉತ್ತಮ ಪರ್ಯಾಯವಾಗಬಹುದು ಎಂದು ಸಂಜೀವಪ್ಪ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.


ರೈತನ ಈ ವಿನೂತನ ಆವಿಷ್ಕಾರ ಇದೀಗ ಸುತ್ತಮುತ್ತಲಿನ ರೈತರ ಮೆಚ್ಚುಗೆಗೆ ಪಾತ್ರವಾಗಿದ್ದು, ಕಡಿಮೆ ವೆಚ್ಚದ ಕೃಷಿ ತಂತ್ರಜ್ಞಾನಕ್ಕೆ ಮಾದರಿಯಾಗಿದೆ. ಕೃಷಿಯಲ್ಲಿ ಹೊಸ ಆಲೋಚನೆಗಳು ಹಾಗೂ ಸ್ಥಳೀಯ ಸಂಪನ್ಮೂಲಗಳ ಸದುಪಯೋಗದಿಂದಲೂ ಉತ್ತಮ ಫಲಿತಾಂಶ ಪಡೆಯಬಹುದು ಎಂಬುದನ್ನು ಈ ರೈತ ದಂಪತಿ ಸಾಬೀತುಪಡಿಸಿದ್ದಾರೆ.