ಕ್ರೈಂ

ಮೃತರು-ನಿವೃತ್ತರ ಹೆಸರಲ್ಲಿ ಹಣ ಲೂಟಿ: 4.24 ಕೋಟಿ ರೂ. ಹಗರಣಕ್ಕೆ ಟ್ವಿಸ್ಟ್

ಮೂಲಕ News Desk | ಪ್ರಕಟಿಸಲಾಗಿದೆ June 23, 2026 June 23, 2026 | 10:28 AM 78 ವೀಕ್ಷಣೆಗಳು

ತುಮಕೂರು: ಮಧುಗಿರಿ ತಾಲೂಕು ಪಂಚಾಯಿತಿಯಲ್ಲಿ ಬರೋಬ್ಬರಿ 4.24 ಕೋಟಿ ರೂಪಾಯಿ ಹಣ ದುರುಪಯೋಗ ನಡೆದಿರುವ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾದ ಸುಮಾರು ಎರಡೂವರೆ ತಿಂಗಳ ಬಳಿಕ ಪ್ರಮುಖ ಆರೋಪಿಗಳಾದ ಎ1 ಸೌಮ್ಯ ಹಾಗೂ ಎ2 ರಮೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ನಿವೃತ್ತ ನೌಕರರ ಗಳಿಕೆ ರಜೆ (Earned Leave) ನಗದೀಕರಣ ಬಿಲ್ಲುಗಳಲ್ಲಿ ಅಕ್ರಮ ನಡೆಸಿ ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದ್ವಿತೀಯ ದರ್ಜೆ ಸಹಾಯಕಿಯಾಗಿದ್ದ ಸೌಮ್ಯ, ಕಾರ್ಯನಿರ್ವಾಹಕ ಅಧಿಕಾರಿ (EO) ಅವರ ಲಾಗಿನ್ ಐಡಿ ಹಾಗೂ ಡಿಜಿಟಲ್ ಸಹಿ ಕೀ ಅನ್ನು ಅಕ್ರಮವಾಗಿ ಬಳಸಿ ಕೋಟ್ಯಂತರ ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.


ಹಗರಣದಲ್ಲಿ ಮೃತ ಹಾಗೂ ನಿವೃತ್ತ ನೌಕರರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಿಗೆ ಸರ್ಕಾರಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

2020ರಿಂದ 2025ರವರೆಗೆ ಸುಮಾರು ಐದು ವರ್ಷಗಳ ಕಾಲ ಈ ಅಕ್ರಮ ನಿರಂತರವಾಗಿ ನಡೆದಿದ್ದು, ಒಟ್ಟು 4.24 ಕೋಟಿ ರೂಪಾಯಿ ಹಣ ದುರುಪಯೋಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಪ್ರಕರಣದ ಹಿನ್ನೆಲೆಯಲ್ಲಿ ಆಗಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮಣ್ ಹಾಗೂ ನಿವೃತ್ತ ಇಒ ದೊಡ್ಡಸಿದ್ದಪ್ಪ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಬಿ.ವಿ. ಅಶ್ವಿಜಾ ಅಮಾನತುಗೊಳಿಸಿದ್ದಾರೆ.


ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಗರಣದ ಕುರಿತು ತನಿಖೆ ಮುಂದುವರಿದಿದೆ. ಇನ್ನೂ ಹಲವು ಅಂಶಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.