ಮಂಡ್ಯ, ಜೂನ್ 20: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 21 ಕಳ್ಳತನ ಪ್ರಕರಣಗಳನ್ನು ಮಂಡ್ಯ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಈ ಸಂಬಂಧ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಶೋಭಾರಾಣಿ ವಿ.ಜೆ., ಬಂಧಿತ ಆರೋಪಿಗಳಿಂದ 553 ಗ್ರಾಂ ಚಿನ್ನಾಭರಣ, 1 ಕೆಜಿ 300 ಗ್ರಾಂ ಬೆಳ್ಳಿ, ಒಂದು ಪ್ಯಾಸೆಂಜರ್ ಆಟೋ, ಒಂದು ದ್ವಿಚಕ್ರ ವಾಹನ ಹಾಗೂ ₹20 ಸಾವಿರ ನಗದು ಸೇರಿದಂತೆ ಒಟ್ಟು ₹86 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಕರಣಗಳ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಎಸ್‌ಪಿ ಶ್ಲಾಘಿಸಿದರು. ಇದೇ ವೇಳೆ ಕಳ್ಳತನಕ್ಕೊಳಗಾಗಿದ್ದ ವಸ್ತುಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಹಿಂತಿರುಗಿಸಲಾಯಿತು.
ಇದರ ಜೊತೆಗೆ, ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯ ಮೊ.ಸಂ.114/26ರ ಕೊಲೆ ಪ್ರಕರಣವನ್ನು ಸಹ ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಕರಣಗಳ ಪತ್ತೆ ಮತ್ತು ಆರೋಪಿಗಳ ಬಂಧನದಲ್ಲಿ ಪ್ರಮುಖ ಪಾತ್ರವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಈ ಸಂದರ್ಭದಲ್ಲಿ ಪ್ರಶಂಸಿಸಿ ಅಭಿನಂದಿಸಲಾಯಿತು.