ಬೆಂಗಳೂರು: ನಗರ ಹೊರವಲಯದ ಅವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಕಲ್ಲಿನ ಕ್ವಾರಿ ಮೇಲೆ ಪೊಲೀಸರು ದಾಳಿ ನಡೆಸಿ, ಅಪಾರ ಪ್ರಮಾಣದ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್‌ಗಳು ಹಾಗೂ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಯಾರಪ್ಪನಹಳ್ಳಿ ಗ್ರಾಮದ ವಿಧಾನಸೌಧ ಲೇಔಟ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ್ವರ ಗ್ರಾನೈಟ್ಸ್ ಸಂಸ್ಥೆಯು ಯಾವುದೇ ಸಂಬಂಧಿತ ಪ್ರಾಧಿಕಾರದ ಅನುಮತಿ ಹಾಗೂ ಅಗತ್ಯ ಪರವಾನಗಿ ಇಲ್ಲದೆ ಕಲ್ಲಿನ ಕ್ವಾರಿ ನಡೆಸುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
ಜೂನ್ 4ರಂದು ರಾತ್ರಿ ಗಸ್ತು ವೇಳೆ ಅವಲಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದಾಗ, ಕಲ್ಲು ಸ್ಫೋಟಿಸಲು ಬಳಸಲಾಗುತ್ತಿದ್ದ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್‌ಗಳು ಹಾಗೂ ಇತರೆ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕ್ವಾರಿ ಚಟುವಟಿಕೆಗೆ ಸಂಬಂಧಿಸಿದಂತೆ ವೆಂಕಟರಮಣ ರೆಡ್ಡಿ, ಲೋಕೇಶ್ ರೆಡ್ಡಿ, ವಿಕಾಸ್, ತೋಹಿದ್ ಹಾಗೂ ಸಂದೀಪ್ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ವಶಪಡಿಸಿಕೊಳ್ಳಲಾದ ಸ್ಫೋಟಕ ಸಾಮಗ್ರಿಗಳನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದು, ಅಕ್ರಮ ಕ್ವಾರಿ ನಡೆಸುತ್ತಿರುವ ಜಾಲದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.
ಪರವಾನಗಿ ಇಲ್ಲದೆ ಅಪಾಯಕಾರಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ಬಳಸಿರುವ ಆರೋಪ ಗಂಭೀರವಾಗಿದ್ದು, ಪ್ರಕರಣದ ಎಲ್ಲ ಆಯಾಮಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.