ಇಂಡಿಯಾ

ದಿವ್ಯಾಂಗ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ: ರೈಲ್ವೇ ಪ್ಯಾಂಟ್ರಿ ಕಾರ್ ಸಿಬ್ಬಂದಿ ಬಂಧನ

ಮೂಲಕ News Desk | ಪ್ರಕಟಿಸಲಾಗಿದೆ June 8, 2026 June 8, 2026 | 08:59 AM 30 ವೀಕ್ಷಣೆಗಳು

ಜಾರ್ಖಂಡ್: ಚಲಿಸುತ್ತಿದ್ದ ರೈಲಿನಲ್ಲಿ ದಿವ್ಯಾಂಗ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ರೈಲ್ವೇ ಪ್ಯಾಂಟ್ರಿ ಕಾರ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.


ಪೊಲೀಸರ ಮಾಹಿತಿ ಪ್ರಕಾರ, 28 ವರ್ಷದ ದಿವ್ಯಾಂಗ ಮಹಿಳೆ ಒಡಿಶಾದಿಂದ ಉತ್ತರ ಪ್ರದೇಶಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ತಡರಾತ್ರಿ 2 ರಿಂದ 3 ಗಂಟೆಯ ಅವಧಿಯಲ್ಲಿ ಮಹಿಳೆ ತನ್ನ ಸೀಟಿನಿಂದ ಎದ್ದು ಶೌಚಾಲಯಕ್ಕೆ ತೆರಳಿದ ವೇಳೆ, ಪ್ಯಾಂಟ್ರಿ ಕಾರ್ ಉದ್ಯೋಗಿಯಾಗಿರುವ ರಾಮ್‌ಜೀತ್ ಎಂಬಾತ ಆಕೆಯ ಹಿಂದೆಯೇ ಹೋಗಿ ಶೌಚಾಲಯದೊಳಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ ಎನ್ನಲಾಗಿದೆ.


ಆರೋಪಿ ಮದ್ಯದ ಅಮಲಿನಲ್ಲಿದ್ದ ಎಂದು ತಿಳಿದುಬಂದಿದ್ದು, ಮಹಿಳೆಯ ವಿರೋಧದ ನಡುವೆಯೂ ಬಲವಂತವಾಗಿ ಕೃತ್ಯ ಎಸಗಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.


ಶೌಚಾಲಯದೊಳಗಿನಿಂದ ಮಹಿಳೆಯ ಕಿರುಚಾಟ ಹಾಗೂ "ಬೇಡ, ಬೇಡ" ಎಂಬ ಕೂಗು ಕೇಳಿಸಿಕೊಂಡ ಹಿನ್ನೆಲೆಯಲ್ಲಿ ರೈಲಿನಲ್ಲಿದ್ದ ಇಬ್ಬರು ಸಹ ಪ್ರಯಾಣಿಕರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಅವರು ಬಲವಂತವಾಗಿ ಶೌಚಾಲಯದ ಬಾಗಿಲು ತೆರೆಯಿಸಿ ಒಳಗೆ ಪ್ರವೇಶಿಸಿದಾಗ ಆರೋಪಿಯು ಮಹಿಳೆಯ ಮೇಲೆ ದೌರ್ಜನ್ಯ ಎಸಗಲು ಯತ್ನಿಸುತ್ತಿರುವುದು ಕಂಡುಬಂದಿದೆ.


ತಕ್ಷಣವೇ ಆರೋಪಿಯಿಂದ ಮಹಿಳೆಯನ್ನು ರಕ್ಷಿಸಿದ ಸಹ ಪ್ರಯಾಣಿಕರು, ಘಟನೆ ಕುರಿತು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ರೈಲು ಮುಂದಿನ ನಿಲ್ದಾಣ ತಲುಪುತ್ತಿದ್ದಂತೆ ರೈಲ್ವೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


ಈ ಘಟನೆ ಚಲಿಸುವ ರೈಲುಗಳಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಪ್ರಯಾಣಿಕರ ಭದ್ರತೆಗಾಗಿ ಕಟ್ಟುನಿಟ್ಟಿನ ಕ್ರಮಗಳ ಅಗತ್ಯವಿದೆ ಎಂಬ

ಚರ್ಚೆಗೆ ಕಾರಣವಾಗಿದೆ.