ಕ್ರೈಂ

ಸಂಶಯದ ಕಿಚ್ಚಿಗೆ ಬಲಿಯಾದ ಮಹಿಳೆ; ಮಚ್ಚಿನಿಂದ ಕೈ, ತಲೆ ಕೊಚ್ಚಿ ಹತ್ಯೆ

ಮೂಲಕ News Desk | ಪ್ರಕಟಿಸಲಾಗಿದೆ April 24, 2026 April 24, 2026 | 11:41 AM 154 ವೀಕ್ಷಣೆಗಳು

ಕೋಲಾರ: ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಚಿನ್ನದ ಗಣಿ ಗ್ರಾಮದ ಬಳಿ ಬುಧವಾರ ಅತ್ಯಂತ ದಾರುಣ ಘಟನೆಯೊಂದು ನಡೆದಿದೆ. ಹೆಂಡತಿಯ ಶೀಲದ ಮೇಲೆ ಸಂಶಯಪಟ್ಟ ಪತಿಯೊಬ್ಬ ಆಕೆಯನ್ನೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಪ್ರಾಪ್ತ ಮಾಹಿತಿಯ ಪ್ರಕಾರ, ಆಂಧ್ರಪ್ರದೇಶದ ಪೆದ್ದೂರು ಮೂಲದ ಗೋಪಿನಾಥ (ಆರೋಪಿ) ತನ್ನ ಪತ್ನಿ ಈಶ್ವರಮ್ಮನ ಶೀಲದ ಬಗ್ಗೆ ಮೊದಲಿನಿಂದಲೂ ಅನುಮಾನ ಹೊಂದಿದ್ದ. ಈಶ್ವರಮ್ಮ ಬಂಗಾರಪೇಟೆಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದಳು.

ಆದರೆ ವಾಪಸ್ ಬರುವ ದಾರಿಯುದ್ದಕ್ಕೂ ಪತಿ-ಪತ್ನಿಯ ನಡುವೆ ತೀವ್ರ ಜಗಳ ನಡೆದಿದೆ. ಈ ವೇಳೆಗಾಗಲೇ ಶೀಲದ ಬಗ್ಗೆ ಸಂಶಯ ಹೊಂದಿದ್ದ ಪತಿ ಗೋಪಿನಾಥ್ ಆಕ್ರೋಶಗೊಂಡು, ಕೈಯಲ್ಲಿದ್ದ ಮಚ್ಚಿನಿಂದ ತನ್ನ ಹೆಂಡತಿ ಈಶ್ವರಮ್ಮನ ಎರಡೂ ಕೈ ಮತ್ತು ತಲೆಗೆ ಬರ್ಬರವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಈಶ್ವರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಘಟನಾ ಸ್ಥಳಕ್ಕೆ ಊರಿಗಾಂ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಗೋಪಿನಾಥನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಊರಿಗಾಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.